ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆ - ನೂತನ ವಿಜಯನಗರ ಜಿಲ್ಲೆಯಲ್ಲಿ ಗಣನೀಯವಾಗಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಿದೆ. ಶೇಕಡ 90.88ರಷ್ಟು ಹಾಜರಾತಿಯನ್ನು ಪಡೆಯುವ ಮೂಲಕ ಇಡೀ ಕಲಬುರಗಿ ವಿಭಾಗೀಯ ಮಟ್ಟದಲ್ಲೇ ಬಳ್ಳಾರಿ- ವಿಜಯನಗರ ಜಿಲ್ಲೆಗಳು ಮೊದಲ ಸ್ಥಾನದಲ್ಲಿವೆ.
ಕಳೆದ ವರ್ಷ ಮಹಾಮಾರಿ ಸೋಂಕು ಆವರಿಸಿದ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿ ಪ್ರತಿ ಕ್ಷೇತ್ರಗಳು ಲಾಕ್ ಆಗಿದ್ದವು. ಇದರಿಂದ ಶಿಕ್ಷಣ ಕ್ಷೇತ್ರ ಹೊರತಾಗಿಲ್ಲ. ಹಂತಹಂತವಾಗಿ ಅನ್ಲಾಕ್ ಆಗುತ್ತಾ ಬಂದರೂ ಕೂಡ ಶಾಲಾ-ಕಾಲೇಜುಗಳು ತೆರೆದಿರಲಿಲ್ಲ. ಈ ವರ್ಷಾರಂಭದಲ್ಲಿ ಶಾಲೆಗಳು ಆರಂಭಗೊಂಡಿದ್ದು, ಶಾಲೆಗಳಿಗೆ ಹಾಜರಾಗುವುದು ವಿದ್ಯಾರ್ಥಿಗಳ-ಪೋಷಕರ ಇಚ್ಛೆಗೆ ಬಿಟ್ಟ ವಿಚಾರವಾಗಿತ್ತು. ಅದರಂತೆ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದು, ಬಳ್ಳಾರಿ ಮತ್ತು ವಿಜಯ ನಗರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಿದೆ.
ಕೋವಿಡ್ ಪೂರ್ವದಲ್ಲಿದ್ದ ಹಾಜರಾತಿ ಪ್ರಮಾಣ:
ಹೌದು, ಕೋವಿಡ್ ಪೂರ್ವದಲ್ಲಿ ಕೇವಲ ಶೇ 45 ರಷ್ಟು ಮಾತ್ರ ಹಾಜರಾತಿ ಪ್ರಮಾಣ ಇತ್ತು. ಕೋವಿಡ್ ನಂತರದಲ್ಲೂ ಕೂಡ ಯಥಾಸ್ಥಿತಿಯಲ್ಲಿತ್ತು. ಆದರೀಗ, ಕೋವಿಡ್ ನಿಯಮಾನುಸಾರವಾಗಿ ಪ್ರಾರಂಭಗೊಂಡ ಸರ್ಕಾರಿ ಶಾಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹಾಜರಾತಿ ಸಂಖ್ಯೆ ಹೆಚ್ಚಾಗಿರುವುದು ಶಿಕ್ಷಣ ಇಲಾಖೆಯ ಸಂತಸಕ್ಕೆ ಕಾರಣವಾಗಿದೆ.
ಅಮೂಲಾಗ್ರ ಬದಲಾವಣೆ :
ಕೋವಿಡ್ ನಿಯಮಾನುಸಾರವಾಗಿ ಪ್ರಾರಂಭಗೊಂಡ ಸರ್ಕಾರಿ ಮತ್ತು ಅರೆ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ತರಗತಿಗಳು ನಡೆಯುತ್ತಿದೆ. ವಿಶೇಷವಾಗಿ 6, 7, 8, 9 ಹಾಗೂ 10ನೇ ತರಗತಿಯಲ್ಲಂತೂ ಅಮೂಲಾಗ್ರ ಬದಲಾವಣೆ ಕಂಡುಬಂದಿದೆ.
ವಿಶೇಷ ಬೋಧನಾ ಕ್ರಮ:
ಈ ಬಾರಿ ಗಣಿಜಿಲ್ಲೆ ಬಳ್ಳಾರಿ ಹಾಗೂ ನೂತನ ವಿಜಯನಗರ ಜಿಲ್ಲೆಯಲ್ಲಿ ಅತ್ಯುತ್ತಮ ಎಸ್ಎಸ್ಎಲ್ಸಿ ಫಲಿತಾಂಶ ಪಡೆಯುವ ಸಲುವಾಗಿ ವಿಶೇಷ ತರಗತಿಗಳ ಬೋಧನಾ ಕ್ರಮ ಹಾಗೂ ಸಾಮೂಹಿಕ ವ್ಯಾಸಂಗ ಮಾಡುವ ಪದ್ಧತಿಯನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಾರಿಗೊಳಿಸಿದೆ.
ಬೋಧನಾ ಕ್ರಮದ ಪರಿವೀಕ್ಷಣೆ:
ಅಲ್ಲದೇ, ಪ್ರತಿದಿನ ಆ ವಿಶೇಷ ತರಗತಿಗಳ ಬೋಧನಾ ಕ್ರಮದ ಪರಿವೀಕ್ಷಣೆಗೆಂದೇ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ವಿಶೇಷ ಬೋಧನಾ ತರಗತಿಗಳ ಪರಿವೀಕ್ಷಣೆ ಕಾರ್ಯವೇ ಈ ತಂಡದ ಪ್ರಮುಖ ಕಾರ್ಯಾಂಶವಾಗಿದೆ. ಇದಲ್ಲದೇ, 6, 7, 8, 9 ನೇ ತರಗತಿಗಳ ಹಾಜರಾತಿ ಪ್ರಮಾಣ ಹೆಚ್ಚಳಕ್ಕೂ ಶ್ರಮಿಸಲಾಗುತ್ತದೆ. ಹೀಗಾಗಿ, ಉಭಯ ಜಿಲ್ಲೆಗಳ ಅಂದಾಜು 1,151 ಶಾಲೆಗಳಲ್ಲಿ ಹಾಜರಾತಿ ಸಂಖ್ಯೆ ಅತ್ಯುತ್ತಮವಾಗಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಡಿಡಿಪಿಐ ಪ್ರತಿಕ್ರಿಯೆ:
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಡಿಡಿಪಿಐ ಸಿ. ರಾಮಪ್ಪ, ಜಿಲ್ಲಾದ್ಯಂತ ಕೋವಿಡ್ ಪೂರ್ವದಲ್ಲಿ ಕೇವಲ ಶೇಕಡ 45 ರಷ್ಟು ಹಾಜರಾತಿಯ ಪ್ರಮಾಣ ಇತ್ತಾದರೂ ಇದೀಗ ಅದು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
- ಬಳ್ಳಾರಿ ಪಶ್ಚಿಮ ವಲಯ- 94.74%
- ಹೂವಿನಹಡಗಲಿ - 76.19%
- ಹಗರಿಬೊಮ್ಮನಹಳ್ಳಿ - 89.36%
- ಹೊಸಪೇಟೆ - 92.47%
- ಕೂಡ್ಲಿಗಿ- 88.14%
- ಸಂಡೂರು- 84.82%
- ಸಿರುಗುಪ್ಪ- 93.81%
- ಬಳ್ಳಾರಿ ಪೂರ್ವ ವಲಯ- 95.35%
- ಹರಪನಹಳ್ಳಿ - 99.39% ರಷ್ಟು ಹಾಜರಾತಿ ಪ್ರಮಾಣ ಏರಿಕೆ ಕಂಡಿದೆ.
ಒಟ್ಟಾರೆಯಾಗಿ ಶೇಕಡ 90.88 ರಷ್ಟು ಹಾಜರಾತಿ ಪ್ರಮಾಣ ಏರಿಕೆಯಾಗಿರೋದು ದಾಖಲಾಗಿದೆ ಎಂದು ಡಿಡಿಪಿಐ ಸಿ. ರಾಮಪ್ಪ ಮಾಹಿತಿ ನೀಡಿದರು.
ಎಸ್ಓಪಿ ಪಾಲನೆ ಕಡ್ಡಾಯ:
ಉಭಯ ಜಿಲ್ಲೆಗಳ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಸ್ಓಪಿ ಪಾಲನೆ ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಾಲೆಯ ಪ್ರತಿ ತರಗತಿಗಳ ಕೊಠಡಿಯಲ್ಲಿ ಕೇವಲ 20 ಮಂದಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಯಾರಿಗಾದರೂ ನೆಗಡಿ, ಕೆಮ್ಮು ಹಾಗೂ ಜ್ವರದಂತಹ ಗುಣಲಕ್ಷಣಗಳು ಕಂಡುಬಂದರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ.
ಇದನ್ನೂ ಓದಿ: ಮಂಡ್ಯ: ಮೂರು ಮುಖದ ವಿಚಿತ್ರ ಆಡು ಮರಿ ಜನನ
ಬಿಸಿಯೂಟ ಜಾರಿಯಲ್ಲಿರದ ಕಾರಣ ಮನೆಯಿಂದಲೇ ಊಟ, ತಿಂಡಿ- ತಿನಿಸುಗಳನ್ನು ತಯಾರಿಸಿಕೊಂಡು ಅದನ್ನು ಪೋಷಕರು ವಿದ್ಯಾರ್ಥಿಗಳಿಗೆ ಮುಟ್ಟಿಸುವ ಅವಕಾಶವನ್ನೂ ಕೂಡ ಕಲ್ಪಿಸಲಾಗಿದೆ. ಬಿಸಿನೀರನ್ನು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುವ ಜವಾಬ್ದಾರಿಯನ್ನು ಪೋಷಕರಿಗೆಯೇ ನೀಡಲಾಗಿದೆ ಎಂದು ಅವರು ವಿವರಿಸಿದರು.