ಬಳ್ಳಾರಿ: ಕಂಟೋನ್‌ಮೆಂಟ್ ಪ್ರದೇಶ ವ್ಯಾಪ್ತಿಯ ಎಸ್.ಕೆ.ಮೋದಿ ನ್ಯಾಷನಲ್ ಶಾಲೆಯಲ್ಲಿ ರಾಜ್ಯ ಮಟ್ಟದ ಯುವ ವಿಜ್ಞಾನಿಗಳ ಸಮಾವೇಶ ನಡೆಯಿತು. ಈ ವೇಳೆ ಉಡುಪಿ ಜಿಲ್ಲೆಯ ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಮಾಜ್ ತಯಾರಿಸಿದ ಏರೋ ಡೈನಾಮಿಕ್ ಬೈಸಿಕಲ್ ಪ್ರಾತ್ಯಕ್ಷಿಕೆಯು ಗಮನ ಸೆಳೆಯಿತು.
ಏರೋ ಡೈನಾಮಿಕ್ ಬೈಸಿಕಲ್ ಪ್ರಾಜೆಕ್ಟ್ :
ಅತ್ಯಾಧುನಿಕ ಯಂತ್ರೋಪಕರಣ ಹಾಗೂ ಬ್ಲೂಟೂತ್ ಸಹಾಯದೊಂದಿಗೆ ಅಂದಾಜು 25 ಕಿಲೋಮೀಟರ್ ದೂರ ಕ್ರಮಿಸಬಹುದು. ವಿಪರೀತ ಕಲುಷಿತ ವಾತಾವರಣದಿಂದಾಗಿ ಪರಿಸರ ಮಾಲಿನ್ಯ ಉಂಟಾಗಿದೆ. ಅದನ್ನು ತಡೆಗಟ್ಟುವ ಸಲುವಾಗಿ ಈ ಏರೋ ಡೈನಾಮಿಕ್ ಬೈಸಿಕಲ್ ಉಪಕಾರಿಯಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜಿನಲ್ಲಿ ಮಹಮ್ಮದ್ ಮಾಜ್ ಪಿಯುಸಿ ಪ್ರಥಮ ವರ್ಷ ಓದುತ್ತಿದ್ದಾರೆ. ಕೇವಲ 12,000 ರೂ. ವ್ಯಯ ಮಾಡಿದ್ದು, ಸೈಕಲ್ ಹಿಂಭಾಗದಲ್ಲಿ ತ್ರಿಚಕ್ರವುಳ್ಳ ಫ್ಯಾನ್ ಅಳಡಿಸಲಾಗಿದೆ. ಸೈಕಲ್ ಸೀಟಿನ ಬಳಿ ಬ್ಯಾಟರಿ ಕೂಡಿಸಿದ್ದು, ಮುಂಭಾಗದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಈ ಬಾಕ್ಸ್ ಮೇಲೆ ಮೊಬೈಲ್ ಅಳವಡಿಸಿ ಬ್ಲೂಟೂತ್ ಸಹಾಯದೊಂದಿಗೆ ಈ ಬೈಸೈಕಲ್ ಚಲಾಯಿಸಬಹುದು. ಈ ಬೈಸಿಕಲ್ ಅಂದಾಜು 20- 25 ಕಿಲೋಮೀಟರ್ ದೂರ ಕ್ರಮಿಸಬಹುದು. ಸೈಕ್ಲಿಂಗ್ ವೇಳೆ ತನ್ನಷ್ಟಕ್ಕೇ ತಾನೇ ಬ್ಯಾಟರಿ ಚಾರ್ಜ್ ಆಗಲಿದೆ. ಈ ಹಿಂದೆ ಅಟ್ಲಾಸ್ ಸೈಕಲ್‌ನ ಹಿಂದಿನ ಟೈಯರ್‌ಗೆ ಡೈನಾಮು ಅಳವಡಿಸಲಾಗಿತ್ತು. ಸೈಕ್ಲಿಂಗ್ ಮಾಡಿದಂತೆಲ್ಲಾ ಬ್ಯಾಟರಿ ಚಾಲಿತಗೊಳ್ಳುತ್ತದೆ. ಅದರಿಂದ ರಾತ್ರಿ ವೇಳೆ ಮುಂದಿನ ಬಲ್ಬು ಆನ್ ಆಗುತ್ತಿತ್ತು. ಅದೇ ಮಾದರಿಯಲ್ಲೇ ಈ ಬೈಸಿಕಲ್ ತಯಾರಿಸಲಾಗಿದೆ. ಅದರಿಂದ ಪರಿಸರ ಮಾಲಿನ್ಯ ತಡೆಯುವ ಜತೆಗೆ ಇಂಧನ ಉಳಿತಾಯ ಮಾಡಬಹುದು.
ವಿಂಡ್ ಪವರ್‌ನಿಂದ ಬೀದಿ ದೀಪ ಪ್ರಜ್ವಲಿಸೋದು, ರಿಮೋಟ್ ಕಂಟ್ರೋಲ್ ಸಹಾಯದೊಂದಿಗೆ ಏರೋಪ್ಲೇನ್ ಚಲಿಸೋದು ಸೇರಿದಂತೆ ಇನ್ನಿತರೆ ಅತ್ಯಾಧುನಿಕ ವಿಜ್ಞಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳು ಇಲ್ಲಿ ಪ್ರದರ್ಶನಗೊಂಡವು. ರಾಜ್ಯದ ನಾನಾ ಜಿಲ್ಲೆಗಳ ಶಾಲಾ - ಕಾಲೇಜಿನ ನೂರಾರು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.