ಬಳ್ಳಾರಿ: ಕೋವಿಡ್-19 ಪರಿಸ್ಥಿತಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸುರಕ್ಷಿತ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಪೊಷಕರು ಪಾಲಿಸಬೇಕು ಎಂದು ಜಿಪಂ ಸಿಇಒ ಕೆ.ನಿತೀಶ್ ಹೇಳಿದರು.
ಪರೀಕ್ಷಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಬಳಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಪರೀಕ್ಷೆಯ ಮುಂಚಿತವಾಗಿ ಹಾಗೂ ಪರೀಕ್ಷೆ ಮುಗಿದ ನಂತರ ಸ್ಯಾನಿಟೈಸ್ ಮಾಡಬೇಕು. ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರಬಾರದು ಹಾಗೂ ಯಾವುದೇ ಕಾರಣಕ್ಕೂ ಕೇಂದ್ರಗಳಲ್ಲಿ ನಕಲು ಮಾಡಲು ಅವಕಾಶ ನೀಡಬಾರದು ಎಂದರು.
ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಬಿ.ಡಿ.ಎ.ಎ ಫುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಗುರುವಾರ ಎಸ್ಎಸ್ಎಲ್ಸಿ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸಲಾಗಿದೆ. ನಿಗದಿತ ಆರೋಗ್ಯ ತಪಾಸಣಾ ಕೌಂಟರ್‌ಗಳು ಪರೀಕ್ಷೆ ನಡೆಯುವ ದಿನಗಳಂದು ಬೆಳಗ್ಗೆ 8.30ರಿಂದ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ತೆರೆದಿರುತ್ತವೆ.
ಪ್ರತಿ ವಿದ್ಯಾರ್ಥಿಯು ಆರೋಗ್ಯ ತಪಾಸಣೆಗೆ ಒಳಪಡುವುದರಿಂದ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೂವತ್ತು ನಿಮಿಷ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರವನ್ನು ತಲುಪಬೇಕು ಎಂದರು.
ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರ ಹಾಗೂ ಇತರ ಅಗತ್ಯ ಸಲಕರಣೆಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗುವ ಬಗ್ಗೆ ಪೋಷಕರು ಖಚಿತಪಡಿಸಿಕೊಳ್ಳುಬೇಕು. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರುವುದರಿಂದ ಪ್ರತ್ಯೇಕ ಆಹಾರದ ಡಬ್ಬಿ, ನೀರಿನ ಬಾಟಲು ಹಾಗೂ ಕರವಸ್ತ್ರವನ್ನು ಕಳುಹಿಸಿಕೊಡುವುದು.
ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಪರೀಕ್ಷಾ ಕೇಂದ್ರಗಳನ್ನು ತಲುಪುವಂತೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ತೆರಳಿದ ನಂತರ ಪೋಷಕರು ಪರೀಕ್ಷಾ ಕೇಂದ್ರದ ಹತ್ತಿರ ಗುಂಪು ಸೇರದೇ ತೆರಳಬೇಕು ಎಂದರು.
ಈ ಸಂದರ್ಭದಲ್ಲಿ ಸೂಚಿಸಿದರು.ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಶ್ರೀನಿವಾಸ, ನಾಗರಾಜ್, ಆರೋಗ್ಯ ಅಧಿಕಾರಿ ಮೇಘರಾಜ್, ಜಿಲ್ಲಾ ಖಜಾನೆ ಅಧಿಕಾರಿ ಕೊಟ್ರೇಶ್ ಸೇರಿದಂತೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು