ಬಳ್ಳಾರಿ: ಅಕ್ರಮ ಭೂ ಹಗರಣದಲ್ಲಿ ಭಾಗಿಯಾಗಿರುವ ಸಚಿವ ಶ್ರೀರಾಮುಲು ಜಾಮೀನಿನ ಮೇಲೆ ಹೊರಗಿದ್ದಾರೆ. ಕಾನೂನಿನ ಮೇಲೆ ಗೌರವ ಇದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲವೇ ಬೊಮ್ಮಾಯಿ ಅವರು ಸಚಿವ ಸ್ಥಾನದಿಂದ ಶ್ರೀರಾಮುಲು ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಆಗ್ರಹಿಸಿದ್ದಾರೆ.
300 ಕೋಟಿ ಅವ್ಯವಹಾರ ಆರೋಪ: ಬಳ್ಳಾರಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ತಿನ್ನಲ್ಲ ತಿನ್ನೋಕೆ ಬಿಡಲ್ಲ ಎನ್ನುತ್ತಾರೆ. ಆದರೆ ಈ ಪ್ರಕರಣದಲ್ಲಿ 300 ಕೋಟಿ ಅವ್ಯವಹಾರ ಆಗಿರುವುದು ಕಂಡು ಬರುತ್ತದೆ. ನಮ್ಮ ನಾಯಕರ ಬಗ್ಗೆ ಮಾತನಾಡಿದ್ದಾರೆ, ಆದರೆ ಇಲ್ಲಿ ನೋಡಿ 6 ಸಾವಿರ ಪುಟಗಳ ಚಾರ್ಜ್ ಶೀಟ್ ಹಾಕಲಾಗಿದೆ. ಬಳ್ಳಾರಿಯ ಲೋಕಾಯುಕ್ತ ಪೊಲೀಸರು 11 ಜನರ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ.
ದೋಷಾರೋಪಣೆ ಪಟ್ಟಿ ಸಲ್ಲಿಕೆ: ಎ1 ಆಗಿನ ಜಿಲ್ಲಾಧಿಕಾರಿ ಬಿ.ಶಿವಪ್ಪ, ಎ2 ಆರ್ ವೆಂಕಟೇಶ್, ಎ3 ಶಶಿಧರ ಬಗಲಿ, ಎ4 ವೀರೇಶಬಾಬು, ಎ6 ಶ್ರೀರಾಮುಲು ಆಗಿದ್ದಾರೆ. ಸಚಿವ ಶ್ರೀರಾಮುಲು ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ, ಜಮೀನು ಕಬಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ 6000 ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಕಳೆದ ಮಾರ್ಚ್ನಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು 12 ಜನರ ಮೇಲೆ ಸಲ್ಲಿಸಿದ್ದು, ಈ ಪ್ರಕರಣದಲ್ಲಿ ಸಚಿವ ಶ್ರೀರಾಮುಲು ಇಂದು ಜಾಮೀನಿನಲ್ಲಿದ್ದಾರೆ ಎಂದು ತಿಳಿಸಿದರು.
ಶ್ರೀರಾಮುಲು ಆರನೇ ಆರೋಪಿ: ಕಾಂಗ್ರೆಸ್ನವರು ಬೇಲ್ ಮೇಲೆ ಇದ್ದಾರೆಂದು ಹೇಳ್ತಾರೆ, ಇವರ ಬೇಲ್ ಮೇಲೆ ಇಲ್ವಾ?. ಶ್ರೀರಾಮುಲು ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ಆತ ಸಾಚಾ ಅಲ್ಲ. ಭೂ ಹಗರಣ ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ. ಈ ಸಂಬಂಧ 6 ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಹ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು, ಜಾಮೀನು ಪಡೆದು ಹೊರಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಜಾತ್ಯತೀತ ಶಕ್ತಿಗಳು ಒಂದಾಗಿ ಎಂಬುದು ನಮ್ಮ ಮುಂದೆ ಇರುವ ವಿಚಾರ: ಉಗ್ರಪ್ಪ
ಆಕುಲ ಲಕ್ಷ್ಮಮ್ಮ ಎಂಬುವರಿಗೆ ಸೇರಿದ 27.25 ಎಕರೆ ಜಮೀನಿನ ಪೈಕಿ 17.25ಎಕರೆ ಜಮೀನನ್ನು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂ ಅಕ್ರಮ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ. ಈ ಪ್ರಕರಣವನ್ನು ನಾವು ಸುಮ್ಮನೆ ಬಿಡುವುದಿಲ್ಲ. ಸದನದೊಳಗೆ ಈ ವಿಷಯ ಪ್ರಸ್ತಾಪ ಮಾಡುತ್ತೇವೆ. ರಾಜ್ಯಪಾಲರಿಗೆ ದೂರು ಕೊಡುತ್ತೇವೆ, ಹೋರಾಟ ಮಾಡಿದ್ದೇವೆ. ಜನತಾ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.