ಬಳ್ಳಾರಿ: ಮುಂದಿನ ಹತ್ತು ದಿನದೊಳಗೆ ಕೋವಿಡ್ ಸೋಂಕಿತರಿಗೆ ಜಿಂದಾಲ್ ಕಂಪನಿಯು ಸೂಕ್ತ ಬೆಡ್ಗಳ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಪಾದಯಾತ್ರೆ ಮಾಡೋದಾಗಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಎಚ್ಚರಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಮಹಾಮಾರಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಬೆಡ್ಗಳ ಕೊರತೆ ಎದುರಾಗಿದೆ. ಹೀಗಾಗಿ, ಸೂಕ್ತ ಬೆಡ್ಗಳ ವ್ಯವಸ್ಥೆ ಮಾಡದೇ ಹೋದರೆ, ಬಳ್ಳಾರಿಯಿಂದ ತೋರಣಗಲ್ಲಿನ ಜಿಂದಾಲ್ ಕಂಪನಿಯವರೆಗೆ ಪಾದ ಯಾತ್ರೆ ಮಾಡೋದಾಗಿ ತಿಳಿಸಿದ್ದಾರೆ.
ಬಳ್ಳಾರಿ ನಗರದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಬೆಡ್, ವೆಂಟಿಲೇಟರ್ಗಳ ಕೊರತೆಯೂ ಇದೆ. ಇದರಿಂದ ಭಾರೀ ಸಮಸ್ಯೆಯಾಗುತ್ತಿದೆ. ಹೋಮ್ ಐಸೋಲೇಷನ್ನಲ್ಲಿರುವವರಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಬಳ್ಳಾರಿ ನಗರದ ಜನತೆ ಕೊರೊನಾದಿಂದ ಭಯಭೀತರಾಗಿದ್ದಾರೆ ಎಂದು ದೂರಿದ್ದಾರೆ.
ಜಿಂದಾಲ್ ಕಂಪನಿ ತಾತ್ಕಾಲಿಕವಾಗಿ ಒಂದು ಸಾವಿರ ಬೆಡ್ಗಳ ವ್ಯವಸ್ಥೆ ಮಾಡಬೇಕು. ನಮ್ಮದೇ ನೆಲ- ಜಲವನ್ನ ಈ ಜಿಂದಾಲ್ ಕಂಪನಿ ಬಳಕೆ ಮಾಡಿಕೊಳ್ಳುತ್ತಿದೆ. ಕಂಪನಿ ಜೊತೆಗೆ ಜಿಲ್ಲೆಯಲ್ಲಿ ಸಾಕಷ್ಟು ಗಣಿ ಉದ್ಯಮಿಗಳಿದ್ದಾರೆ. ಜಿಂದಾಲ್ ಕಂಪನಿ ಬೆಡ್ಗಳ ವ್ಯವಸ್ಥೆ ಮಾಡದಿದ್ರೆ ಉಗ್ರ ಹೋರಾಟ ನಡೆಸುತ್ತೇವೆ. ಜಿಲ್ಲೆಯ ಆಸ್ಪತ್ರೆಯಲ್ಲಿ ವೆಂಟಿಲೇಟರ್ಗಳ ಕೊರತೆ ಇದೆ. ಸೋಂಕಿತರಿಗೆ ವೆಂಟಿಲೇಟರ್ ಸಿಗುತ್ತಿಲ್ಲ. ಸಮರ್ಪಕ ಚಿಕಿತ್ಸೆ ಸಿಗದೆ ಸಾವನ್ನಪುತ್ತಿದ್ದಾರೆ ಎಂದ್ರು.
ಸೋಂಕು ಅತಿ ವೇಗವಾಗಿ ಹರಡುತ್ತಿದೆ ಹೀಗಾಗಿ ಜಿಲ್ಲೆಯಲ್ಲಿ 15 ದಿನ ಸಂಪೂರ್ಣ ಲಾಕ್ಡೌನ್ ಮಾಡಬೇಕು. ಜಿಲ್ಲೆಯಲ್ಲಿ ಎಷ್ಟು ಬೆಡ್ಗಳಿವೆ ಅನ್ನೋದು ಗೊತ್ತಾಗುತ್ತಿಲ್ಲ. ಕೊರೊನಾ ಸೋಂಕಿತರಲ್ಲದವರಿಗೂ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಇತ್ತೀಚೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಒಬ್ಬರು ಸಾವನ್ನಪ್ಪಿದ್ದಾರೆ. ಜಿಂದಾಲ್ ಕಂಪನಿಗೆ ಹತ್ತು ದಿನ ಗಡುವು ನೀಡಲಾಗುವುದು ಎಂದು ಶಾಸಕ ಸೋಮಶೇಖರರೆಡ್ಡಿ ತಿಳಿಸಿದ್ದಾರೆ.