ಬಳ್ಳಾರಿ /ವಿಜಯನಗರ: ಅವಳಿ ಜಿಲ್ಲೆಗಳ ಜಾನುವಾರುಗಳಲ್ಲಿ ಚರ್ಮಗಂಟು ರೋಗ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಎರಡು ಜಿಲ್ಲೆಗಳಲ್ಲಿ ಸುಮಾರು 3,593 ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಈ ಪೈಕಿ 222 ಜಾನುವಾರುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.
ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಜಾನುವಾರುಗಳನ್ನು ರಕ್ಷಣೆ ಮಾಡಲು ಅಗತ್ಯ ಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಸುಮಾರು 90 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂದು ಪಶು ಸಂಗೋಪನೆ ಇಲಾಖೆಯ ಜಿಲ್ಲಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಜೊತೆಗೆ ಎತ್ತಿಗೆ 30 ಸಾವಿರ, ಹಸುಗೆ 20 ಸಾವಿರ ಹಾಗೂ ಕರುಗೆ 5 ಸಾವಿರ ರೂ ಪರಿಹಾರ ನೀಡಲಾಗುತ್ತಿದೆ. ಸದ್ಯ ಎಲ್ಲ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿದೆ. ಜಿಲ್ಲೆಯಲ್ಲಿ ದನಕರುಗಳು ಹಾಗೂ ಎತ್ತುಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿದ್ದು, ಬಹುತೇಕ ಎಲ್ಲ ಹಳ್ಳಿಯ ಭಾಗದ ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿದೆ.
ಇನ್ನು ಈ ರೋಗವು ಎಮ್ಮೆಗಳಲ್ಲಿ ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿ ಇಬ್ಬರಂತೆ ಪಶು ವೈದ್ಯರನ್ನು ನೇಮಕ ಮಾಡಲಾಗಿದೆ. ಅದೇ ರೀತಿಯಾಗಿ ಜಿಲ್ಲೆಯಲ್ಲಿ ಆಂಧ್ರಾಳ್ ಮತ್ತು ಕಂಪ್ಲಿಯಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪಶುವೈದ್ಯರ ಹಾಗೂ ಸಿಬ್ಬಂದಿ ಕೊರತೆ ಇದ್ದು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೇ ಜಿಲ್ಲಾದ್ಯಂತ ಚಿಕಿತ್ಸೆಗಾಗಿ ತೆರಳುವುದರಿಂದ ರೋಗ ನಿಯಂತ್ರಣಕ್ಕೆ ಬರುವವರೆಗೆ ಹೆಚ್ಚಿನ ವೈದ್ಯರ ಹಾಗೂ ಸಿಬ್ಬಂದಿ ನೀಡುವಂತೆ ರೈತ ಮುಖಂಡ ಪುರುಷೋತ್ತಮ್ ಗೌಡ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಸುಗಳಲ್ಲಿ ಚರ್ಮಗಂಟು ರೋಗ: ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ