ಬಳ್ಳಾರಿ: ಲೋಕಸಭಾ ಚುನಾವಣೆಗೂ ಮುನ್ನವೇ ಗಣಿನಾಡಿನಲ್ಲಿ ಕೈಗೊಂಡಿದ್ದ ವಿದ್ಯುತ್ ಚಾಲಿತ ರೈಲು ಸಂಚಾರದ ಲೈನ್ ಪೂರ್ಣ ಗೊಂಡರೂ, ಇನ್ನೂ ಕೂಡ ವಿದ್ಯುತ್ ಚಾಲಿತ ರೈಲು ಸಂಚಾರ ಶುರುವೇ ಆಗಿಲ್ಲ ಇದಕ್ಕೆ ಕಾರಣ ಕೇಳಿದರೆ ಸಿಗ್ನಲ್ ಅಳವಡಿಸದೇ ಇರೋದು ಪ್ರಮುಖ ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ.
ಹೌದು, ಜಿಲ್ಲೆಯ ತೋರಣಗಲ್ಲಿನವರೆಗೂ ಈಗಾಗಲೇ ವಿದ್ಯುತ್ ಚಾಲಿತ ರೈಲ್ವೇ ಲೈನ್ ಪೂರ್ತಿಯಾಗಿದೆ. ಅದು ಹೊಸಪೇಟೆವರೆಗೂ ವಿಸ್ತರಿಸಲಿದೆ. ತೋರಣಗಲ್ಲಿನ ಬಳಿ ಈವರೆಗೂ ಸಿಗ್ನಲ್ ಅಳವಡಿಕೆ ಕಾರ್ಯ ನಡೆದಿದೆ. ಹೀಗಾಗಿ, ಈ ವಿದ್ಯುತ್ ಚಾಲಿತ ರೈಲು ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ಡಿಸೆಂಬರ್ ತಿಂಗಳವರೆಗೂ ಈ ರೈಲು ಸಂಚಾರ ಶುರುವಾಗಲಿದೆ ಎಂದು ಎರಡನೇ ರೈಲ್ವೇ ಇಲಾಖೆಯ ಮೂಲಗಳು ಹೇಳುತ್ತಿವೆ.
ಬಳ್ಳಾರಿ ತಾಲೂಕಿನ ಹದ್ದಿನಗುಂಡು ಮಾರ್ಗದಿಂದ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನವರೆಗೆ, ಜಿಂದಾಲ್ - ಬನ್ನಿಹಟ್ಟಿ ಮತ್ತು ರಂಜಿತಪುರ ಮಾರ್ಗವಾಗಿ ಈಗಾಗಲೇ ವಿದ್ಯುತ್ ಸಂಪರ್ಕವುಳ್ಳ ಟ್ರ್ಯಾಕ್ ಅಳವಡಿಸುವ ಕಾರ್ಯವೂ ಮುಕ್ತಾಯ ವಾಗಿದೆ. ಹದ್ದಿನಗುಂಡು ರೈಲು ನಿಲ್ದಾಣದಿಂದ ತೋರಣಗಲ್ಲಿನವರೆಗೂ ಸರಿ ಸುಮಾರು 36 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ಟ್ರ್ಯಾಕ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.
ವಿದ್ಯುತ್ ಚಾಲಿತ ರೈಲು ಟ್ರೈಯಲ್ ರನ್ ಮುಕ್ತಾಯ: ವಿದ್ಯುತ್ ಚಾಲಿತ ರೈಲ್ವೇ ಟ್ರ್ಯಾಕ್ ಮೇಲೆ ಮೇ.15 ರೊಳಗೆ ಟ್ರೈಯಲ್ ರನ್ ಟೆಸ್ಟ್ ಮಾಡಲಾಗುವುದು. ಆ ಬಳಿಕ ಬಳ್ಳಾರಿ - ತೋರಣಗಲ್ಲು ಮಾರ್ಗವಾಗಿ ವಿದ್ಯುತ್ ಚಾಲಿತ ರೈಲನ್ನು ಓಡಿಸಲು ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. 2018ರ ಜನವರಿ ತಿಂಗಳಲ್ಲಿ ಈ ವಿದ್ಯುತ್ ಚಾಲಿತ ರೈಲ್ವೆ ಟ್ರ್ಯಾಕ್ ಅಳವಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, 2019ರ ಮೇ ತಿಂಗಳಲ್ಲಿ ಮೊದಲನೇ ಹಂತದ ವಿದ್ಯುತ್ ಚಾಲಿತ ರೈಲನ್ನು ಓಡಿಸಲು ರೈಲ್ವೆ ಇಲಾಖೆಯು ಸನ್ನದ್ಧವಾಗಿತ್ತು.
ಎರಡನೇ ಹಂತದಲ್ಲಿ ತೋರಣಗಲ್ಲು - ಹೊಸಪೇಟೆ ಮಾರ್ಗದ ವಿದ್ಯುತ್ ಚಾಲಿತ ರೈಲನ್ನು ಓಡಿಸುವ ಸಲುವಾಗಿ ಈಗಾಗಲೇ ವಿದ್ಯುತ್ ಟ್ರ್ಯಾಕ್ ಅಳವಡಿಸಲಾಗುತ್ತಿದೆ. ಇದಲ್ಲದೇ, ಚಿಕ್ಕ ಜಾಜೂರು - ಬೆಂಗಳೂರು ಮಾರ್ಗದಲ್ಲೂ ವಿದ್ಯುತ್ ಚಾಲಿತ ಟ್ರ್ಯಾಕ್ ಅಳವಡಿಸಲಾಗುತ್ತಿದೆ. ಅದು ಕೂಡ ಶೀಘ್ರವೇ ಪೂರ್ಣಗೊಳ್ಳಲಿದ್ದು, ಈ ಮಾರ್ಗವಾಗಿಯೂ ಕೂಡ ವಿದ್ಯುತ್ ಚಾಲಿತ ರೈಲು ಗಾಡಿ ಓಡುವ ಸಾಧ್ಯತೆಯಿದೆ.
2019 ಮೇ. 15 ರೊಳಗೆ ಈ ವಿದ್ಯುತ್ ಚಾಲಿತ ರೈಲು ಸಂಚಾರದ ನಿರೀಕ್ಷೆಯಲ್ಲಿ ಗಣಿನಾಡಿನ ಪ್ರಯಾಣಿಕರಿದ್ದರು. ಆದರೀಗ ನಾಲ್ಕು ತಿಂಗಳು ಕಳೆದರೂ ಈ ರೈಲು ಸಂಚಾರ ಮಾತ್ರ ಶುರುವಾಗಿಲ್ಲ. ಇದೀಗ ಡಿಸೆಂಬರ್ ತಿಂಗಳಾಂತ್ಯಕ್ಕೆ ಶುರುವಾಗುವ ಸಾಧ್ಯತೆಯಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಒಟ್ಟಾರೆಯಾಗಿ ಈ ವಿದ್ಯುತ್ ಚಾಲಿತ ರೈಲಿನಲ್ಲಿ ಸಂಚರಿಸುವ ಅವಕಾಶವನ್ನು ಗಣಿನಾಡಿನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಕಲ್ಪಿಸಲಿದೆ ಎಂಬ ಬಹು ನಿರೀಕ್ಷೆಯಲ್ಲಿದ್ದಾರೆ.