ಬಳ್ಳಾರಿ: ಗಡಿನಾಡಿನ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ಉತ್ಸವ ವಿಶೇಷವಾಗಿದ್ದು, ನಗರದ ಕೌಲ್ ಬಜಾರ್ನಲ್ಲಿರುವ ಗಾಣಿಗರ ಸಮುದಾಯದ ಜನರು ಈ ಸಿಡಿಬಂಡಿ ಉತ್ಸವವನ್ನು ಆಚರಿಸುವಲ್ಲಿ ಅತಿ ಪ್ರಮುಖರು.
ಶ್ರೀ ಕನಕ ದುರ್ಗಮ್ಮ ದೇವಿಯ ದೇವಸ್ಥಾನವನ್ನು ಗಾಣಿಗರ ಸಮುದಾಯದ ಸಿರುಗುಪ್ಪದ ಒಂದು ಜೊತೆ ಹಾಗೂ ಬಳ್ಳಾರಿಯ ಎರಡು ಜೊತೆ ಒಟ್ಟು ಆರು ಎತ್ತುಗಳು ಮೂರು ಸುತ್ತು ಸುತ್ತಿ ಸಿಡಿಬಂಡಿ ಎಳೆಯುವ ಮೂಲಕ ಪ್ರದರ್ಶನ ಹಾಕಿ ದೇವಿ ಕೃಪೆಗೆ ಪಾತ್ರವಾಗುತ್ತವೆ.
ಹಿನ್ನೆಲೆ:
ಶ್ರೀ ಕನಕ ದುರ್ಗಮ್ಮ ದೇವಾಲಯಕ್ಕೆ 350 ವರ್ಷಗಳ ಇತಿಹಾಸವಿದೆ. ಜಿಲ್ಲೆಯ ಗಾಣಿಗ (ಗಾಂಡ್ಲ) ಸಮಾಜದ ಜನರು ಸಿಡಿಬಂಡಿ ಉತ್ಸವವನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಸಿಡಿಬಂಡಿಗೆ 155 ವರ್ಷಗಳ ಕಾಲ ಇತಿಹಾಸಿ ಇದೆ.
ಜಾತ್ಯಾತೀತ ಸಿಡಿಬಂಡಿ:
ಸಿಡಿಬಂಡಿ ಕಟ್ಟುವವರು ವಾಲ್ಮೀಕಿ ಜನಾಂಗ, ಸಿಡಿಎ ಪೂಜೆ ಮಾಡುವವರು ಸಿಡಿಬಂಡಿ ಓಡಿಸುವವರು ಗಾಣಿಗ ಸಮುದಾಯ, ತಪಡಿ ಬಾರಿಸುವವರು ಮತ್ತೊಂದು ಜನಾಂಗ. ಈ ಸಿಡಿಬಂಡಿ ಮೆರವಣಿಗೆಯನ್ನು ನೀಡುವವರು ಹಲವಾರು ಜಾತಿ ಜನಾಂಗದವರಾಗಿದ್ದಾರೆ. ನಾವೆಲ್ಲರೂ ಒಂದೇ ಎನ್ನುವ ಭಾವನೆ ಹೊಂದಿದ್ದಾರೆ. ಇದು ವಿವಿಧ ಉತ್ಸವಗಳಿಗೆ ಮಾದರಿಯಾಗಿದೆ.
ಎತ್ತುಗಳಿಗೆ ವಿಶೇಷ ಅಲಂಕಾರ:
ದಾರಿ ಉದ್ದಕ್ಕೂ ಎತ್ತುಗಳಿಗೆ ಪಾದಗಳಿಗೆ ನೀರು ಹಾಕಿ, ಊದಿನಕಡ್ಡಿ ಹಚ್ಚಿ, ಮಂಗಳಾರತಿಯನ್ನು ಮಾಡಿ ನಮಸ್ಕಾರ ಮಾಡಿ ಮುಂದಕ್ಕೆ ಕಳಿಸುವ ಪದ್ಧತಿ ನೂರಾರು ಭಕ್ತರಿಂದ ನಡೆಯುತ್ತದೆ.