ಹೊಸಪೇಟೆ: ಶಂಕರ ಆನಂದ ಸಿಂಗ್ ಕಾಲೇಜಿನಲ್ಲಿ ಒಬಿಸಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದನ್ನು ನಿಲ್ಲಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಕಾರ್ಯಕರ್ತರು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಶಂಕರ ಆನಂದ ಸಿಂಗ್ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಶುಲ್ಕ ಪಾವತಿಸಿದ್ದರೂ ಒಬಿಸಿ (2ಎ) ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ 5,140 ರೂ. ಪಡೆಯಲಾಗುತ್ತಿದೆ. ಶುಲ್ಕ ಪಡೆಯುವುದರ ಕುರಿತು ಸರ್ಕಾರ ಆದೇಶದ ಮೂಲಕ ಸುತ್ತೋಲೆ ಹೊರಡಿಸಿಲ್ಲ. ಆದರೆ, ಶಂಕರ ಆನಂದ ಸಿಂಗ್ ಪ್ರಥಮ ದರ್ಜೆಯ ಕಾಲೇಜಿನ ಪ್ರಾಂಶುಪಾಲರು ಶುಲ್ಕವನ್ನು ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಯಾವ ಕಾಲೇಜಿನಲ್ಲಿ ಸಹ ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಿಲ್ಲ. ಕೂಡಲೇ ಶುಲ್ಕ ಪಡೆಯುವುದನ್ನು ನಿಲ್ಲಿಸಬೇಕು ಎಂದು ಸಚಿವ ಆನಂದ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.