ಬಳ್ಳಾರಿ: ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರದ ಕಡೆಯಿಂದ ಆರ್ಥಿಕ ಸಹಾಯ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಟಿಇ ಕಡೆಯಿಂದ ಸಂಪೂರ್ಣವಾಗಿ ಹಣ ಪಾವತಿ ಮಾಡಬೇಕು ಎಂದು ಬಳ್ಳಾರಿ ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಮರಿಸ್ವಾಮಿರೆಡ್ಡಿ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮಾತನಾಡಿದ ಅವರು, ಕೋವಿಡ್-19ನಿಂದ ಖಾಸಗಿ ಶಾಲಾ-ಕಾಲೇಜುಗಳು ಕಳೆದ ಮಾರ್ಚ್ನಿಂದ ಮುಚ್ಚಲ್ಪಟ್ಟಿವೆ. 2020ರ ಸಾಲಿನಲ್ಲಿ ಶಾಲಾ ಶುಲ್ಕದಲ್ಲಿ 50ರಿಂದ 60ರಷ್ಟು ಮಾತ್ರ ಶುಲ್ಕ ಪಾವತಿಸಿದ್ದಾರೆ. ಯಾವುದೇ ಪರೀಕ್ಷೆಗಳು ಇಲ್ಲದೆ ಉತ್ತೀರ್ಣರಾಗಿದ್ದಾರೆ. ಮಾರ್ಚ್ 2019 - 2020ನೇ ಸಾಲಿನ ಶಾಲಾ ಶುಲ್ಕ ಪಾವತಿಯಾಗಿಲ್ಲ ಎಂದರು.
ಆರ್ಟಿಇ ಕಾಯ್ದೆಯ ಅಡಿಯಲ್ಲಿ ದಾಖಲಾದ ವಿದ್ಯಾರ್ಥಿಗಳ ಶುಲ್ಕವು ಸರ್ಕಾರದಿಂದ ಫೆಬ್ರವರಿ 2020ರ ಅಂತ್ಯದೊಳಗೆ ಪಾವತಿಯಾಗುತ್ತಿತ್ತು. ಆದರೆ ಈ ವರ್ಷ ಶಾಲೆಗಳಿಗೆ ಮೊದಲನೇ ಕಂತು ಬಂದಿದೆ. ಆದರೆ ಎರಡನೇ ಹಂತದ ಕಂತುಗಳು ಇನ್ನೂ ಅನೇಕ ಶಾಲೆಗಳಿಗೆ ಪಾವತಿಯಾಗಿಲ್ಲ. ಇನ್ನು ಆನ್ಲೈನ್ ಕ್ಲಾಸ್ಗಳಿಗೂ 10ರಿಂದ 15 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಶುಲ್ಕ ಸಹ ಸರಿಯಾಗಿ ಪಾವತಿಸುತ್ತಿಲ್ಲ. ಇದರಿಂದಾಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಸಂಬಳ ನೀಡಲು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಹಾಯ ನೀಡಬೇಕು ಎಂದು ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಶಿಕ್ಷಕಿ ಗಾಯತ್ರಿ, ಕಳೆದ ಐದು ವರ್ಷಗಳಿಂದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೋವಿಡ್ ವೈರಸ್ನಿಂದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಜೀವನ ಮಾಡುವುದು ಕಷ್ಟಕರವಾಗಿದೆ. ಸರ್ಕಾರದ ಕಡೆಯಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ಖಾಸಗಿ ಶಾಲೆಯ ಶಿಕ್ಷಕರಿಗೆ ಆರ್ಥಿಕ ಸಹಾಯದೊಂದಿಗೆ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿದರು.