ಹೊಸಪೇಟೆ : ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ಬೇಜವಾಬ್ದಾರಿಯಿಂದ ಕೊರೊನಾ ಉಲ್ಬಣವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಆರೋಪಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಚುನಾವಣಾ ಪ್ರಚಾರ, ಸಭೆ, ಸಮಾರಂಭ ಮಾಡಿದ್ದರಿಂದಲೇ ಕೊರೊನಾ ಹಬ್ಬಲು ಕಾರಣವಾಯಿತು ಎಂದು ಹೇಳಿದರು.
ಕೊರೊನಾ ಹತೋಟಿಗೆ ಕ್ರಮವಹಿಸಬೇಕಾದ ಆಡಳಿತ ಪಕ್ಷದ ಬೇಜವಾಬ್ದಾರಿಯಿಂದ ಲಕ್ಷಾಂತರ ಸಾವು-ನೋವು ಸಂಭವಿಸಿವೆ. ಜನ ಸಾಮಾನ್ಯರಿಗೆ ಸರಿಯಾದ ಚಿಕಿತ್ಸೆ ದೊರೆತಿಲ್ಲ. ನಂಬಲಾರ್ಹ ಸಂಸ್ಥೆಗಳ ಪ್ರಕಾರ, ಸರ್ಕಾರ ನೀಡಿರುವ ಸಾವಿನ ವಿವರದ ಆರು ಪಟ್ಟು ಹೆಚ್ಚು ಸಾವು ಸಂಭವಿಸಿವೆ. ಸರ್ಕಾರದ ಅಂಕಿ-ಅಂಶಗಳೇ ಬೇರೆ ಇದೆ ಎಂದು ಸಂಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೋವಿಡ್ ಸಂದರ್ಭ ಸಾವಿನ ಲೆಕ್ಕ ಕೇಳಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧಾರ!
ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿಯೂ ಸಾವಿರಾರು ಜನರನ್ನು ಸೇರಿಸಿ ಪ್ರಚಾರ ನಡೆಸಿದ್ದರು. ಕೊರೊನಾ ಸಾವು- ನೋವಿಗೆ ಇವರ ಬೇಜವಾಬ್ದಾರಿತನವೇ ಕಾರಣ ಎಂದು ಟೀಕಿಸಿದರು.