ಬಳ್ಳಾರಿ/ಹುಬ್ಬಳ್ಳಿ: ರಾಜ್ಯದಾದ್ಯಂತ ಇಂದು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು. ಹುಬ್ಬಳ್ಳಿ ಹಾಗೂ ಬಳ್ಳಾರಿ ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂರು ಏಕಕಾಲಕ್ಕೆ ಸಾಮೂಹಿಕ ಪ್ರಾರ್ಥನೆ ಮಾಡಿದರು. ವೃದ್ದರಿಂದ ಹಿಡಿದು ಚಿಕ್ಕಮಕ್ಕಳು ಕೂಡ ಭಾಗವಹಿಸಿದ್ದರು. ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ದಾನ - ಧರ್ಮದ ಮಹತ್ವ ಕುರಿತು ಭೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಬಳ್ಳಾರಿಯ ಪ್ರಾರ್ಥನಾ ಸ್ಧಳದಲ್ಲಿ ಸಚಿವ ಶ್ರೀರಾಮುಲು, ಶಾಸಕರಾದ ಸೋಮಶೇಖರ್ ರೆಡ್ಡಿ, ನಾಗೇಂದ್ರ, ಕಾಂಗ್ರೆಸ್ ಮುಖಂಡ ಭರತ್ ರೆಡ್ಡಿ ಭಾಗವಹಿಸಿ ಹಬ್ಬದ ಶುಭಾಶಯ ಕೋರಿದರು. ಹಬ್ಬದ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಹುಬ್ಬಳ್ಳಿಯ ಪ್ರತಿಷ್ಠಿತ ಈದ್ಗಾ ಮೈದಾನ ಸೇರಿದಂತೆ ಲ್ಯಾಮಿಂಗ್ಟನ್ ರೋಡ್, ಚೆನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಆವರಣದಲ್ಲಿ ಮುಸ್ಲಿಂರು ರಂಜಾನ್ ಕೊನೆಯ ದಿನದ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಇದನ್ನೂ ಓದಿ: ಚಿತ್ರರಂಗದಲ್ಲಿ ರಂಜಾನ್ ಸಂಭ್ರಮ: ಸಲ್ಮಾನ್, ಅಮೀರ್ರಿಂದ ಹಬ್ಬದ ಶುಭಾಶಯ
ಸಾಮೂಹಿಕ ಪ್ರಾರ್ಥನೆ ವೇಳೆ ಕೆಲವರು ಬಿರು ಬಿಸಿಲಿನ ಹೊಡತಕ್ಕೆ ಛತ್ರಿ ಹಿಡಿದು ಬಂದಿದ್ದು ಕಂಡು ಬಂತು. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಸೇರಿ ಸ್ಥಳೀಯ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಪವಿತ್ರ ಮಾಸ ರಂಜಾನ್ ಶುಕ್ರವಾರ ಮುಗಿದಿದ್ದು, ಶನಿವಾರ ಶವ್ವಲ್ ಮೊದಲನೇ ದಿನದಂದು ಈದ್ - ಉಲ್ - ಫಿತರ್ (ರಂಜಾನ್) ಹಬ್ಬ ಆಚರಿಸಿದ್ದಾರೆ. ರಂಜಾನ್ ಹಬ್ಬದ ಸಂಪ್ರದಾಯದಂತೆ ಒಂದು ತಿಂಗಳ ಕಾಲ ಉಪವಾಸ ವೃತ ಆಚರಿಸಿದ್ದಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟು ಉಪವಾಸ ವೃತ ಆಚರಿಸುತ್ತಾರೆ. ಉಪವಾಸ (ರೋಜಾ) ಮಾತ್ರವಲ್ಲದೇ ದಾನ ( ಝಕಾತ್) ನಮಾಜ್, ಕುರಾನ್ ಪಠನ, ತರಾವೀಹ್ ಮಾಡುವ ಮೂಲಕ ದೇವರನ್ನು ಸ್ಮೃತಿಸಲಾಗುತ್ತದೆ.
ಬೆಂಗಳೂರು:- ಮುಸ್ಲಿಂ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಉತ್ತಮ ಶಾಲೆಗಳ ನಿರ್ಮಿಸಲಾಗಿದೆ-ಸಚಿವ ಗೋಪಾಲಯ್ಯ
ಬೆಂಗಳೂರಲ್ಲಿ ರಂಜಾನ್ ಆಚರಣೆ: ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ, ಕಂಠೀರವನಗರದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಸಚಿವ ಗೋಪಾಲಯ್ಯ ಶುಭಾಶಯ ಕೋರಿದರು ಈ ವೇಳೆ ಮಾತನಾಡಿದ ಅವರು, ಕಂಠೀರವ ನಗರದಲ್ಲಿ ಶಾಲೆ ನಿರ್ಮಿಸಿ ಮಕ್ಕಳು ಸೂಕ್ತವಾಗಿ ಶಿಕ್ಷಣವನ್ನು ಪಡೆಯಲು ಅನುಕೂಲ ಮಾಡಿದ್ದೇನೆ. ನಾವೆಲ್ಲರೂ ಸಹೋದರರಾಗಿ ಪ್ರೀತಿ, ವಿಶ್ವಾಸದಿಂದ ಇರೋಣ. ಎಲ್ಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಮಹದೇವು, ಡಾ.ನಾಗೇಂದ್ರ, ಉಮಾಪತಿ ನಾಯ್ಡು, ಪುಟ್ಟಸ್ವಾಮಿ, ಕೇಶವಮೂರ್ತಿ, ಮಂಜುನಾಥ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ದೇಶಾದ್ಯಂತ ಈದ್ ಉಲ್ ಫಿತರ್ ಸಂಭ್ರಮ: ಪ್ರಧಾನಿ ಮೋದಿ ಶುಭ ಕೋರಿಕೆ