ಮೆಣಸಿನಕಾಯಿಗೆ ಬಂಪರ್ ಬೆಲೆ ಇದ್ದರೂ ಪ್ರಯೋಜನವಿಲ್ಲ... ಕೊಳೆರೋಗ ತಂದಿಟ್ಟ ಸಂಕಷ್ಟ! - ballary chilly crops problem
ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದ್ದರೂ ಕೂಡ ಈ ಮಳೆ ತಂದೊಡ್ಡಿದ ಸಂಕಷ್ಟದಿಂದ ಬಹು ನಿರೀಕ್ಷಿತ ಪ್ರಮಾಣದ ಆದಾಯ ಬರುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿ ಜಿಲ್ಲೆಯ ರೈತರಿದ್ದಾರೆ. ಜಿಲ್ಲಾದ್ಯಂತ ಸುರಿದ ತುಂತುರು ಮಳೆಯಿಂದ ಮತ್ತೆ ಕೊಳೆರೋಗ ಕಾಣಿಸಿಕೊಂಡಿದ್ದು, ಮೆಣಸಿನಕಾಯಿ ಬೆಳೆಗಾರರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಬಳ್ಳಾರಿ: ಕಳೆದ ಮೂರು ದಿನಗಳಿಂದ ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಸುರಿದ ತುಂತುರು ಮಳೆಯಿಂದ ಮತ್ತೆ ಕೊಳೆರೋಗ ಕಾಣಿಸಿಕೊಂಡಿದ್ದು, ಮೆಣಸಿನಕಾಯಿ ಬೆಳೆಗಾರರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಹೌದು, ಗಣಿನಾಡು ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಬೆಳೆದ ಗುಂಟೂರು, ಬ್ಯಾಡಗಿ ಹಾಗೂ 5531 ತಳಿಯ ಮೆಣಸಿನಕಾಯಿ ಬೆಳೆಯನ್ನು ಕಟಾವು ಮಾಡಿ ಖಾಲಿಯಿರುವ ಜಾಗದಲ್ಲಿ ಒಣ ಹಾಕಲಾಗಿತ್ತು. ಆದ್ರೆ ಮೆಣಸಿನಕಾಯಿ ದಾಸ್ತಾನಿಗೆ ಮಳೆಯ ನೀರು ನುಗ್ಗಿದ ಪರಿಣಾಮ ತೇವಾಂಶದಿಂದ ಕೂಡಿದೆ. ಇದರಿಂದ ಶೇಕಡ 60 ರಷ್ಟು ಪ್ರಮಾಣದ ಮೆಣಸಿನಕಾಯಿ ಹಾಳಾಗಿ ಹೋಗುವ ಆತಂಕ ರೈತರಲ್ಲಿ ಮೂಡಿದೆ.
ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದ್ದರೂ ಕೂಡ ಈ ಮಳೆ ತಂದೊಡ್ಡಿದ ಸಂಕಷ್ಟದಿಂದ ಬಹು ನಿರೀಕ್ಷಿತ ಪ್ರಮಾಣದ ಆದಾಯ ಬರುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿ ಜಿಲ್ಲೆಯ ರೈತರಿದ್ದಾರೆ.
ಈ ಸುದ್ದಿಯನ್ನೂ ಓದಿ: ವರ್ಷದ ಕೂಳು ಕಸಿದ ಅಕಾಲಿಕ ಮಳೆ : ನೆಲಕಚ್ಚಿದ ಬಿಳಿ ಜೋಳದ ಬೆಳೆ
ತಾಲೂಕಿನ ಸೋಮಸಮುದ್ರ ಸೇರಿ ನಾನಾ ಗ್ರಾಮಗಳ ರೈತರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ. ಈ ಕುರಿತು ಮಾತನಾಡಿರುವ ರೈತರು, ಪ್ರತಿ ವರ್ಷವೂ ಕೂಡ ಮೆಣಸಿನಕಾಯಿ ಬೆಳೆಗೆ ಕೊಳೆ ರೋಗ ಬರೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಈ ಬಾರಿ ಎರಡೆರಡು ಸಲ ಕೊಳೆರೋಗ ಅಂಟಿಕೊಂಡು ಮೆಣಸಿನಕಾಯಿ ಬೆಳೆಗಾರರನ್ನು ಆರ್ಥಿಕ ಸಂಕಷ್ಟ ಎದುರಿಸುವಂತೆ ಮಾಡಿದೆ. ಈ ಮೊದಲು ಸುರಿದ ಅಕಾಲಿಕ ಮಳೆಯಿಂದಾಗಿ ಇಳುವರಿ ಕಮ್ಮಿಯಾಗಿತ್ತು. ಆದರೆ ಸದ್ಯ ಮೆಣಸಿನಕಾಯಿ ಬೆಳೆಯ ಧಾರಣೆ ಹೆಚ್ಚಿರೋದರಿಂದ ನಮಗೆ ಖುಷಿಯಾಗಿತ್ತು. ಆದರೀಗ ಮಳೆಯಿಂದಾಗಿ ಒಣ ಹಾಕಿದ ಮೆಣಸಿನಕಾಯಿಗೂ ಕೂಡ ಕೊಳೆರೋಗ ಅಂಟಿಕೊಂಡಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆಯೆಂದು ತಮ್ಮ ಅಳಲು ತೋಡಿಕೊಂಡರು.