ಹೊಸಪೇಟೆ : ವಿಶ್ವವಿಖ್ಯಾತ ಹಂಪಿಯಲ್ಲಿ ಇನ್ನು ಮುಂದೆ ಡೀಸೆಲ್ ಇಂಜಿನ್ ರೈಲು ಬೋಗಿಗಳ ಸದ್ದು ಕೇಳಲಿದೆ. ಈ ರೈಲು ಬೋಗಿಗಳು ಪ್ರವಾಸಿಗರಿಗೆ ಮಾಹಿತಿಯೊಂದಿಗೆ ಐತಿಹಾಸಿಕ ಸ್ಥಳಗಳ ಬಗ್ಗೆ ಚಿತ್ರಣ ನೀಡಲಿವೆ. ಪ್ರವಾಸೋದ್ಯಮಕ್ಕೆ ಚೈತನ್ಯ ನೀಡಲು ವಿಶ್ವ ಪರಂಪರೆ ಹಂಪಿ ನಿರ್ವಹಣಾ ಪ್ರಾಧಿಕಾರ ಕಾರ್ಯನ್ಮುಖವಾಗಿದೆ.
ಸದ್ಯ ಹಂಪಿಯಲ್ಲಿ ಸಾಮಾನ್ಯ ಬಸ್ಗಳು ಓಡಾಡುತ್ತಿವೆ. ಇದರಿಂದ ಪ್ರವಾಸಿಗರಿಗೆ ಐತಿಹಾಸಿಕ ಪ್ರದೇಶಗಳ ಮಾಹಿತಿ ಲಭ್ಯವಾಗುವುದಿಲ್ಲ. ಪ್ರವಾಸಿಗರಿಗೆ ಅನಾನುಕೂಲ ಮತ್ತು ಮಾಹಿತಿ ಒಳಗೊಂಡ ಡಿಸೇಲ್ ಇಂಜಿನ್ ರೈಲು ಬೋಗಿಗಳು ಓಡಾಟ ಕೆಲ ದಿನಗಳಲ್ಲಿ ಪ್ರಾರಂಭವಾಗಲಿದೆ.
ರೈಲು ಬೋಗಿಗಳ ಓಡಾಟಕ್ಕೆ ಒಪ್ಪಂದ : ಈಗಾಗಲೇ ಡೀಸೆಲ್ ಇಂಜಿನ್ ರೈಲು ಬೋಗಿಗಳ ಓಡಾಟಕ್ಕೆ ವಿಶ್ವ ಪರಂಪರೆ ಹಂಪಿ ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರೀವಿಲ್ಯಾನ್ಸ್ ಸಂಸ್ಥೆ ಮಧ್ಯೆ ಒಪ್ಪಂದವಾಗಿದೆ. ನವೆಂಬರ್ ಮೊದಲನೇ ವಾರದಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವಕ್ಕೆ ಬೋಗಿಗಳ ಓಡಾಟಕ್ಕೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿದೆ.
ರೈಲು ಬೋಗಿಗಳ ವಿಶೇಷತೆ : ಬಸ್ಗೆ ಮೂರು ರೈಲು ಬೋಗಿಗಳನ್ನು ಜೋಡಣೆ ಮಾಡಲಾಗುತ್ತದೆ. ರೈಲು ಬೋಗಿಗಳ ತರ ವಿನ್ಯಾಸ ಮಾಡಲಾಗಿರುತ್ತದೆ. ಒಂದು ಬಾರಿಗೆ 30 ಪ್ರವಾಸಿಗರು ಪ್ರಯಾಣಿಸಬಹುದಾಗಿದೆ. ಬಸ್‌ನ ಬೋಗಿಗಳಲ್ಲಿ ಐತಿಹಾಸಿಕ ತಾಣಗಳ ಮಾಹಿತಿ ಇರಲಿದೆ. ಬೋಗಿಗಳಲ್ಲಿ ಸ್ಮಾರಕಗಳ ಚಿತ್ರಗಳಿರಲಿವೆ. ಸಾಮಾನ್ಯ ಬಸ್‌ಗಳಲ್ಲಿ ಈ ಮಾಹಿತಿ ಇರುತ್ತಿರಲಿಲ್ಲ.
ದರ ನಿಗದಿ : ಪ್ರವಾಸಿಯೊಬ್ಬರಿಗೆ 300 ರೂ.ನಿಗದಿ ಮಾಡಲಾಗಿದೆ. ಒಮ್ಮೆ ಟಿಕೆಟ್ ಪಡೆದುಕೊಂಡರೆ ಬಸ್‌ನ ರೈಲು ಬೋಗಿಗಳಲ್ಲಿ ದಿನಪೂರ್ತಿ ಓಡಾಟ ಮಾಡಬಹುದು. ಅಲ್ಲದೇ, ರಾಣಿಸ್ನಾನಗೃಹ ಬಳಿ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯವಿರಲಿದೆ. ದಿನವೂ ಪ್ರವಾಸಿಗರು ಸ್ಮಾರಕಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ರೈಲು ಬೋಗಿಗಳು ಓಡಾಟ ಮಾಡಲಿವೆ.
ರೈಲು ಬೋಗಿಗಳ ಓಡಾಟ ಮಾರ್ಗ: ಕಮಲಾಪುರ ಮಯೂರು ಭುವನೇಶ್ವರಿನಿಂದ ರೈಲು ಬೋಗಿಗಳ ಓಡಾಟ ಪ್ರಾರಂಭವಾಗಲಿದೆ. ರಾಣಿಸ್ನಾನಗೃಹ, ಕೆಳ ಮಟ್ಟದ ಶಿವಾಲಯ, ಉದ್ದಾನ ವೀರಭದ್ರ, ಉಗ್ರನರಸಿಂಹ, ಸಾಸಿವೆಕಾಳು, ಕಡಲೆಕಾಳು, ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಓಡಾಡಲಿದೆ.
ಆನೆಗುಂದಿಗೆ ವಿಸ್ತರಣೆ : ಮೊದಲ ಹಂತದಲ್ಲಿ ಹಂಪಿಯಲ್ಲಿ ರೈಲು ಬೋಗಿಗಳ ಓಡಾಟ ಪ್ರಾರಂಭಿಸಲಾಗುತ್ತಿದೆ. ಬಳಿಕ ವಿಜಯವಿಠ್ಠಲ ದೇವಸ್ಥಾನದ ಬಳಿ ಬರುವ ಗೆಜ್ಜಲಮಂಟಪದಿಂದ ಆನೆಗುಂದಿಗೆ ಪ್ರಾರಂಭಿಸುವ ಆಲೋಚನೆ ಮಾಡಲಾಗಿದೆ.
ಗೈಡ್‌ಗಳಿಗೆ ವರ್ಕ್‌ಶಾಪ್ : ಅಕ್ಟೋಬರ್ ತಿಂಗಳಿನಲ್ಲಿ ಗೈಡ್‌ಗಳಿಗೆ ವರ್ಕ್‌ಶಾಪ್ ನಡೆಸುವ ನಿರ್ಧಾರ ಮಾಡಲಾಗಿದೆ. ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಜಂಟಿಯಾಗಿ ವರ್ಕ್‌ಶಾಪ್ ಹಮ್ಮಿಕೊಳ್ಳಲಿದೆ. 150ಕ್ಕಿಂತ ಹೆಚ್ಚು ಗೈಡ್‌ಗಳಿದ್ದಾರೆ. ಅದರಲ್ಲಿ ಕಾರ್ಯನ್ಮುಖರಾದವರ ಸಂಖ್ಯೆ ಕಡಿಮೆ ಇದೆ. ಅಲ್ಲದೇ, ದರಗಳ ಪಟ್ಟಿ ಹೊಂದಿಲ್ಲ. ಗೈಡ್‌ಗಳು ದೊರೆಯುವ ಒಂದು ನಿರ್ದಿಷ್ಟ ಸ್ಥಳವಿಲ್ಲ. ಹಾಗಾಗಿ, ನಿರ್ದಿಷ್ಟ ಸ್ಥಳ ಸೂಚಿಸಿ, ದರದ ಪಟ್ಟಿಯ ನಾಮಫಲಕವನ್ನು ಹಾಕಲಾಗುತ್ತದೆ. ಅಲ್ಲದೇ, ಸಮವಸ್ತ್ರ ಕಡ್ಡಾಯಗೊಳಿಸಲಾಗುತ್ತದೆ. ಇದರಿಂದ ಪ್ರವಾಸಿಗರಿಗೆ ತೊಂದರೆ ತಪ್ಪಲಿದೆ. ಈ ಹಿನ್ನೆಲೆ ವರ್ಕ್‌ಶಾಪ್ ನಡೆಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
ಈಟಿವಿ ಭಾರತ್‌ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಹಂಪಿ ನಿರ್ವಹಣಾ ಪ್ರಾಧಿಕಾರ ಆಯುಕ್ತ ಪಿ ಎನ್ ಲೋಕೇಶ್ ಅವರು, ರೈಲು ಬೋಗಿಗಳ ಓಡಾಟ ನವೆಂಬರ್ ಮೊದಲನೇ ವಾರದಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ, ಪ್ರೀವಿಲ್ಯಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಸಿದ್ಧತೆಗೆ ಸ್ಪಲ್ಪ ಮಟ್ಟಿಗೆ ತೊಡಕಾಗಿದೆ ಎಂದು ತಿಳಿಸಿದರು.