ರಾಯಚೂರು: ತಲೆಮರೆಸಿಕೊಂಡು ಬಂದ ಯುವಕರನ್ನು ರಾಯಚೂರು ಜಿಲ್ಲೆ ಲಿಂಗಸೂಗುರು ವಸತಿ ನಿಲಯದ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ತಮ್ಮನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
ಮೂಲತಃ ಉತ್ತರ ಪ್ರದೇಶದವರಾದ ಯುವಕರು ಬಳ್ಳಾರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಜಿಲ್ಲಾಡಳಿತ ತಮಗೆ ಸಮರ್ಪಕ ಊಟ, ಉಪಹಾರ ವ್ಯವಸ್ಥೆ ಮಾಡಲಿಲ್ಲ. ತಮ್ಮ ರಾಜ್ಯಕ್ಕೆ ಕಳುಹಿಸುವ ಭರವಸೆ ಸಿಗದೆ ಹೋಗಿದ್ದರಿಂದ ಸಿಕ್ಕ ವಾಹನಗಳ ಮೂಲಕ ಹೊರಟಿದ್ದೆವು ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರ, ಗೋವಾ ಸೇರಿದಂತೆ ಹೊರ ರಾಜ್ಯಗಳಿಂದ ತಾಲೂಕಿಗೆ ಬಂದಿರುವ 65 ಜನ ಕೂಲಿ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಕರಡಕಲ್ ಎಸ್‍ಟಿ ಹಾಸ್ಟೆಲ್‍ನಲ್ಲಿ 35, ಯರಡೋಣ ಸರ್ಕಾರಿ ಪ್ರೌಢ ಶಾಲೆಯಲ್ಲಿ 9, ಈಚನಾಳ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ 21 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.