ವಿಜಯನಗರ: ಕಾರಿನಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಚಾಲಕನಿಗೆ ದಂಡ ಹಾಕಿದ ವಿಚಾರವಾಗಿ ಸಂಚಾರಿ ಠಾಣೆ ಪೊಲೀಸರು ಹಾಗೂ ಮಗುವಿನ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದೆ. ಪೊಲೀಸರ ವರ್ತನೆ ವಿರೋಧಿಸಿ ನಿನ್ನೆ ರಾತ್ರಿ ಕುಟುಂಬಸ್ಥರು ಹೊಸಪೇಟೆ ನಗರದ ಮೂರಂಗಡಿ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಪಟ್ಟಣ ಸೆರಗು ಗ್ರಾಮದಿಂದ ಕುಟುಂಬವೊಂದು ಮದುವೆಗೆ ಆಗಮಿಸಿತ್ತು. ಈ ವೇಳೆ, ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಲು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಕಾರು ತಡೆದ ಪೊಲೀಸರು, ಲೈಸೆನ್ಸ್ ಸೇರಿದಂತೆ ದಾಖಲಾತಿ ತೋರಿಸಿ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಕಾರ್ ಅನ್ನು ಕ್ರೇನ್‌ಗೆ ಏರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಮಗು ಸಮೇತ ನಡು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು.
ಮಗುವಿನ ಆರೋಗ್ಯ ಉತ್ತಮವಾಗಿಲ್ಲ, ಬೇಗ ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿದರೂ ಪೊಲೀಸರು ವಿನಾಕಾರಣ ದಾಖಲಾತಿ ಕೇಳುತ್ತಿರುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಅರ್ಧಗಂಟೆ ಬಳಿಕ ಸಾರ್ವಜನಿಕರು, ವಾಹನ ಸವಾರರು ಮನವಿ ಮಾಡಿದ ನಂತರ ಪೊಲೀಸರು ಅಲ್ಲಿಂದ ಬಿಟ್ಟು ಕಳುಹಿಸಿದರು.
ಇದನ್ನೂ ಓದಿ: ಬಸ್ - ಲಾರಿ ಮುಖಾಮುಖಿ ಡಿಕ್ಕಿ: 5 ಮಂದಿ ಸ್ಥಿತಿ ಗಂಭೀರ