ಹೊಸಪೇಟೆ (ಬಳ್ಳಾರಿ): ರಾಜ್ಯಸಭೆಯ ಡಾ.ಸೈಯ್ಯದ್ ನಾಸೀರ್ ಹುಸೇನ್ ಸೇರಿದಂತೆ 8 ಸದಸ್ಯರನ್ನು ಅಮಾನತು ಮಾಡಿದ ಆದೇಶವನ್ನು ತಕ್ಷಣವೇ ರದ್ದುಪಡಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ನಿಂದ ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈತ ವಿರೋಧಿ ಕೃಷಿ ಮಸೂದೆಗಳನ್ನು ಅಂಗೀಕರಿಸದಂತೆ ಹಾಗೂ ರಾಜ್ಯಸಭೆಯಲ್ಲಿ ಈ ಮಸೂದೆಗಳನ್ನು ವಿರೋಧಿಸಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಸ್ಪೀಕರ್ 8 ಸದಸ್ಯರನ್ನು ಎಂಟು ದಿನಗಳ ಕಾಲ ಅಮಾನತು ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರೈತರ ಅಭಿವೃದ್ಧಿ ಮಾಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ದೇಶದ ರೈತರಿಗೆ ಮಾರಕವಾಗುವಂತಹ ಮೂರು ಮಸೂದೆಗಳನ್ನು ಚರ್ಚೆಗೆ ಅವಕಾಶ ನೀಡದೇ ಸುಗ್ರೀವಾಜ್ಞೆಯ ಮೂಲಕ ಸಂಸತ್ತಿನಲ್ಲಿ ಅಂಗೀಕಾರ ಪಡೆಯಲಾಗಿದೆ. ಇದು ಈ ದೇಶದ ರೈತರಿಗೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಹಶೀಲ್ದಾರ್ ಎಚ್.ವಿಶ್ವನಾಥ ಅವರಿಗೆ ಮನವಿ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ, ವಿ.ಸೋಮಪ್ಪ, ಮುಖಂಡರಾದ ಗುಜ್ಜಲ್ ನಾಗರಾಜ್, ನಿಂಬಗಲ್ ರಾಮಕೃಷ್ಣ, ವೀರಸ್ವಾಮಿ ಇನ್ನಿತರರಿದ್ದರು.