ಬಳ್ಳಾರಿ : ಗಣಿ ಜಿಲ್ಲೆಯ ಮೂರು ಖಾಸಗಿ ಹೋಟೆಲ್ಗಳ ಮಾಲೀಕರು ಕೋವಿಡ್ ಸೋಂಕಿತರ ಸೇವೆಗೆ ಮುಂದಾಗಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ಸಲುವಾಗಿ ಪ್ರತ್ಯೇಕ ಕೊಠಡಿ ಮೀಸಲಿರಿಸಿದ್ದಾರೆ.
ಕೋವಿಡ್ ಸೋಂಕಿನ ಗುಣಲಕ್ಷಣ ಇರದ ಹಾಗೂ ಸೌಮ್ಯಯುತ (ಮೈಲ್ಡ್) ಕೋವಿಡ್ ಪಾಸಿಟಿವ್ ರೋಗಿಗಳು ತಮಗೆ ದುಬಾರಿಯಾದ್ರೂ ಪರವಾಗಿಲ್ಲ. ಸುಸಜ್ಜಿತ ಕೊಠಡಿ ಹಾಗೂ ಅಗತ್ಯ ಸೌಲಭ್ಯ ಹೊಂದಿರುವ ಹೋಟೆಲ್ಗಳೇ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅದನ್ನ ಅರಿತ ಜಿಲ್ಲಾಡಳಿತ, ಮೂರು ಖಾಸಗಿ ಹೋಟೆಲ್ಗಳನ್ನು ಗುರುತಿಸಿದ್ದು, ಅದರಲ್ಲಿ ನೂರಾರು ಮಂದಿಯನ್ನು ಇರಿಸಿದ್ದಾರೆ.
ಖಾಸಗಿ ಹೋಟೆಲ್ಗಳಲ್ಲಿ ದಿನಕ್ಕೆ ₹6,000 ಪಾವತಿಸಬೇಕು ಎಂದು ಮಾಲೀಕರೇ ಘೋಷಿಸಿದ್ದಾರೆ. ಅದರಂತೆಯೇ ಸೋಂಕಿತರು ಹಣ ಪಾವತಿ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶಾನುಸಾರವೇ ಈ ಪ್ಯಾಕೇಜ್ ಘೋಷಣೆಯಾಗಿದ್ದು, ಸೋಂಕಿತರಿಂದಲೂ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬಳ್ಳಾರಿಯ ಪೋಲಾ ಪ್ಯಾರಡೈಸ್, ಬಾಲಾ ರಿಜೆನ್ಸಿ ಹಾಗೂ ಕೋಲಾಚಲಂ ಕಾಂಪೌಂಡ್ನಲ್ಲಿರುವ ಸನ್ಮಾನ್ ಹೋಟೆಲ್ಗಳು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾಗಿವೆ. ಕೋವಿಡ್ ಕೇರ್ ಸೆಂಟರ್ಗಳಾದ್ರೂ ಹೋಟೆಲ್ ವಾತಾವರಣವೇ ಇರುತ್ತದೆ. ಸೋಂಕಿತರು ಯಾವುದೇ ರೀತಿಯ ರೋಗದ ಭಯಕ್ಕೆ ಒಳಗಾಗುವುದಿಲ್ಲ. ಸದ್ಯ ಹೊಸದಾಗಿ ಮೂರು ಖಾಸಗಿ ಹೋಟೆಲ್ಗಳು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿವೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಪೋಲಾ ಪ್ಯಾರಡೈಸ್ ಹೋಟೆಲ್ ಮಾಲೀಕ ವಿಕ್ರಮ್ ಪೋಲಾ, ನಮ್ಮ ಹೋಟೆಲ್ನಲ್ಲಿ 50 ಕೊಠಡಿಗಳಿವೆ. ಅವುಗಳಲ್ಲಿ 40ರಲ್ಲಿ ಸೋಂಕಿತರಿದ್ದಾರೆ. ಈಗಾಗಲೇ 15 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
24 ಗಂಟೆಗಳ ಕಾಲ ವೈದ್ಯಕೀಯ ಸೇವೆ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸ್ಟಾಫ್‌ನರ್ಸ್, ಯೋಗ-ಪ್ರಾಣಾಯಾಮ, ಇಬ್ಬರು ವೈದ್ಯರಿಂದ ಸಕಾಲದಲ್ಲಿ ಆರೋಗ್ಯ ಸೇವೆ ನೀಡಲಾಗುತ್ತದೆ. ಗುಣಮಟ್ಟದ ಆಹಾರವನ್ನೂ ಕೂಡ ಪೂರೈಕೆ ಮಾಡಲಾಗುತ್ತದೆ ಎಂದರು.