ವಿಜಯನಗರ : ದಿಢೀರ್ ಬೆಂಕಿ ಹೊತ್ತಿಕೊಂಡು ಖಾಸಗಿ ಬಸ್ವೊಂದು ಹೊತ್ತಿ ಉರಿದ ಘಟನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ನಸುಕಿನ ಜಾವ ನಡೆದಿದೆ. ಬೆಂಗಳೂರಿನಿಂದ ಹೊಸಪೇಟೆ ಮಾರ್ಗವಾಗಿ ರಾಯಚೂರು ಜಿಲ್ಲೆಯ ಮಸ್ಕಿ, ಹಟ್ಟಿಗೆ ತೆರಳುತ್ತಿದ್ದ ಬಸ್‌ನ ಟಯರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ.
ಬಸ್ನಲ್ಲಿದ್ದ 30 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಕೆನ್ನಾಲಿಗೆಗೆ ವಾಹನ ಸುಟ್ಟು ಕರಕಲಾಗಿದೆ.
ಬೆಳಗಿನ ಜಾವ 3:30ರ ಸುಮಾರಿಗೆ ಟಯರ್ ಸ್ಫೋಟಗೊಂಡಿದೆ. ಬಸ್ನಲ್ಲಿ ಎಮರ್ಜೆನ್ಸಿ ಫೈಯರ್ ಎಕ್ಸಿಸ್ಟೆನ್ಸ್ ಇಲ್ಲದೇ ಇರುವುದರಿಂದ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೆಂಕಿಯ ರುದ್ರನರ್ತನಕ್ಕೆ ಪ್ರಯಾಣಿಕರ ಕೆಲವು ವಸ್ತುಗಳ ಸುಟ್ಟು ಕರಕಲಾಗಿವೆ. 112ಕ್ಕೆ ಫೋನ್ ಕರೆ ಮಾಡಿದ್ರೆ ದೆಹಲಿಗೆ ಸಂಪರ್ಕ ಕಲ್ಪಿಸುತ್ತದೆ. ಹತ್ತಿರದ ಠಾಣೆಗೆ ಸಂಪರ್ಕ ಸಿಗಲಿಲ್ಲ. ಒಂದು ಗಂಟೆಗೂ ಮೊದಲು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದರೆ ಬಸ್ಗೆ ಹೆಚ್ಚು ಹಾನಿಯಾಗುತ್ತಿರಲ್ಲಿಲ್ಲ ಎಂದು ಹೈವೇ ಪೊಲೀಸರು, ಅಗ್ನಿಶಾಮಕ ಇಲಾಖೆ, ಬಸ್ ಮಾಲೀಕರ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಎಂಜಿನ್ ಇಲ್ಲದೇ ಸಂಚರಿಸಿದ ಬೋಗಿಗಳು... ಎಂಜಿನ್ನಿಂದ ಬೇರ್ಪಟ್ಟಿದ್ದ ಗೂಡ್ಸ್ ಬೋಗಿಗಳು: ತಪ್ಪಿದ ಭಾರಿ ಅನಾಹುತ
ಇತ್ತೀಚಿನ ಘಟನೆಗಳು: ಕಳೆದ 2 ದಿನಗಳ ಹಿಂದೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಹೊತ್ತಿ ಉರಿದಿರುವ ಘಟನೆ ಮಂಡ್ಯದ ಶ್ರೀ ರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗೇಟ್ ಬಳಿ ನಡೆದಿತ್ತು. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾರು ಸಂಪೂರ್ಣ ಭಸ್ಮವಾಗಿತ್ತು. ರಾಜಸ್ಥಾನ ಮೂಲದ ವಿಕ್ಕಿ ಮತ್ತು ಸ್ನೇಹಿತರು ತಮಿಳುನಾಡಿನಲ್ಲಿ ಸ್ನೇಹಿತನ ಕಾರು ಪಡೆದು, ವ್ಯಾಪಾರದ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಗಣಂಗೂರು ಬಳಿ ತಲುಪಿದಾಗ ಕಾರಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಗೌಡಹಳ್ಳಿ ಗೇಟ್ ಬಳಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದ ಮೂವರು ಕೆಳಗೆ ಇಳಿದಿದ್ದು, ಪ್ರಾಣಹಾನಿ ಸಂಭವಿಸಿರಲಿಲ್ಲ. ಬೆಂಕಿಯ ಜ್ವಾಲೆಗೆ ಕಾರು ಸಂಪೂರ್ಣ ಸುಟ್ಟು ಹೋಗಿದೆ.
ಇದನ್ನೂ ಓದಿ : ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು
ಬೆಂಕಿ ಅವಘಡದಿಂದ ರೆಸಾರ್ಟ್ವೊಂದು ಹೊತ್ತಿ ಉರಿದಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿಯಲ್ಲಿ ಸೆಪ್ಟೆಂಬರ್ 4 ರಂದು ನಡೆದಿದೆ. ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತದ ರಸ್ತೆಯಲ್ಲಿರುವ ವಂಡರ್ಲಸ್ಟ್ ರೆಸಾರ್ಟ್ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ರೆಸಾರ್ಟ್ನ 10 ಕೊಠಡಿಗಳ ಪೈಕಿ 8 ಕೊಠಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿತ್ತು.
ಇದನ್ನೂ ಓದಿ : ಬೆಂಕಿ ಅವಘಡದಿಂದ ಹೊತ್ತಿ ಉರಿದ ರೆಸಾರ್ಟ್ : ಅಪಾರ ಹಾನಿ