ಬಳ್ಳಾರಿ : ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ಜಿಲ್ಲೆಯ ನಾನಾ ತಾಲೂಕಿನಾದ್ಯಂತ ಇಂದಿನಿಂದ ಪ್ರವಾಸ ಕೈಗೊಳ್ಳಲು ಜಿಲ್ಲಾ ಹೋರಾಟ ಸಮಿತಿ ನಿರ್ಧರಿಸಿದೆ.
ಬಳ್ಳಾರಿಯ ಪೋಲಾ ಪ್ಯಾರಾಡೈಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕುಡಿತಿನಿ ಶ್ರೀನಿವಾಸ ಮಾತನಾಡಿ, ಜಿಲ್ಲೆಯ ಕಂಪ್ಲಿ, ಸಂಡೂರು ಮತ್ತು ಸಿರುಗುಪ್ಪ ತಾಲೂಕಿನಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯವನ್ನು ಈ ದಿನದಿಂದಲೇ ಪ್ರಾರಂಭಿಸಲಾಗುವುದು ಎಂದರು.
ಒಂದೆಡೆ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿ ಹೋರಾಟವು ಕೇಂದ್ರ ಸ್ಥಾನದಲ್ಲಿ ನಡೆದ್ರೆ, ಮತ್ತೊಂದೆಡೆ ನಾನಾ ತಾಲೂಕಿನಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆ ಕುರಿತು ಜನಜಾಗೃತಿ ಮೂಡಿಸಲಾಗುವುದು. ಆ ಬಳಿಕ ಎಲ್ಲಾ ಮಾಹಿತಿ ಸಂಗ್ರಹಿಸಿ ಕೋರ್ಟ್ ಮೊರೆ ಹೋಗಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ ಜಿ. ಪುರುಷೋತ್ತಮ ಗೌಡರು ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಗೆ ಯಾವೊಬ್ಬ ಜನಪ್ರತಿನಿಧಿಯೂ ಧ್ವನಿ ಎತ್ತಲಿಲ್ಲ. ಎಲ್ಲರೂ ಆನಂದ ಸಿಂಗ್ ಪರವಾಗಿಯೇ ಧ್ವನಿ ಎತ್ತಿದ್ದಾರೆ.
ನಿಮಗೇನಾದ್ರೂ ಕಿಂಚಿತ್ತೂ ಈ ಜಿಲ್ಲೆಯ ಕುರಿತು ಕಾಳಜಿ ಇದ್ದರೆ ವಿರೋಧಿ ಹೋರಾಟಕ್ಕೆ ಬೆಂಬಲ ನೀಡಿ. ಹೊಸ ಜಿಲ್ಲೆಯ ರಚನೆಯ ಕುರಿತು ವಿಶೇಷ ಕಾಳಜಿ ಇದ್ದರೆ ಹಗರಿಬೊಮ್ಮನಹಳ್ಳಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಿ ಎಂದು ಆಗ್ರಹಿಸಿದರು.
ಕರವೇ (ಟಿ ಎ ನಾರಾಯಣ ಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿ ಹೋರಾಟವು ಯಾವತ್ತಿಗೂ ನಿಲ್ಲುವುದಿಲ್ಲ. ಯಾರೇ ಅಡ್ಡಿಪಡಿಸಿದ್ರೂ ನಾವಂತೂ ಈ ಹೋರಾಟದಿಂದ ಹಿಂದೆ ಸರಿಯೋದಿಲ್ಲ ಎಂದರು.