ಬಳ್ಳಾರಿ: ಜಿಲ್ಲೆಯಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹರಸಾಹಸ ಮಾಡುತ್ತಿದೆ. ತಂತ್ರಜ್ಞಾನದ ಮೊರೆ ಹೋದ ಬುಕ್ಕಿಗಳು ಚೀಟಿಯಲ್ಲಿ ನಡೆಯುತ್ತಿದ್ದ ದಂಧೆಯನ್ನು ಈಗ ಮೊಬೈಲ್ ಮೂಲಕ ನಡೆಸುತ್ತಿದ್ದಾರೆ. ಹೀಗಾಗಿ, ಪೊಲೀಸರಿಗೆ ದಂಧೆಕೋರರನ್ನು ಹಿಡಿಯುವುದು ಹೊಸ ಸವಾಲಾಗಿದೆ. ಮೊದಲು ಚೀಟಿ ಬರೆದು ಕೊಡುವಾಗ ಪೊಲೀಸರ ಕೈಗೆ ಸುಲಭವಾಗಿ ಸಿಕ್ಕಿಕೊಳ್ಳುವ ಸಂಭವವಿತ್ತು. ಈಗ ಮೊಬೈಲ್‌ನಲ್ಲಿ ನಂಬರ್‌ಗಳನ್ನು ಪಡೆದು ಪಟ್ಟಿ ತೆಗೆದುಕೊಳ್ಳಲಾಗುತ್ತಿದೆ.
ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ.. ಹೀಗೆ ನಗರದ ಏಳನೇ ವಾರ್ಡ್, ಮಿಲ್ಲರ್‌ಪೇಟೆ, ಸಣ್ಣ ಮಾರುಕಟ್ಟೆ, ಬೆಂಕಿ ಮಾರಮ್ಮ ದೇವಸ್ಥಾನ, ಬಂಡಿಮೋಟ್, ಕಪ್ಪಗಲ್ಲು ರಸ್ತೆ, ಕೌಲ್ ಬಜಾರ್ ಸೇರಿ ನಗರದ ಹಲವೆಡೆ ಹಾಗೂ ಗ್ರಾಮೀಣ ಭಾಗದ ವಿವಿಧ ಹಳ್ಳಿಗಳಲ್ಲೂ ಬುಕ್ಕಿಗಳು ಬಹಿರಂಗವಾಗಿಯೇ ಮಟ್ಕಾ ಬರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಟ್ಕಾ ದಂಧೆಗೆ ಕೂಲಿ ಕಾರ್ಮಿಕರು, ಹಮಾಲಿಗಳೇ ಬಲುಪಶುಗಳು. ಈಗೀಗ ಯುವಕರೂ ಇದರಲ್ಲಿ ತೊಡಗಿಕೊಂಡಿರುವುದು ಆತಂಕ ಉಂಟು ಮಾಡಿದೆ. ಪ್ರತಿನಿತ್ಯ ದುಡಿಯುವ ಹಣವನ್ನು ಈ ದಂಧೆಯಲ್ಲಿ ಕಳೆದುಕೊಂಡು ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ.
ಮೊದಲು ಮಟ್ಕಾ ಆಡುವವರು ರಾತ್ರಿ ವೇಳೆ ಆಟ ಆಡುತ್ತಿದ್ದರು. ಆದರೆ, ಇದೀಗ ದಿನಕ್ಕೆ ನಾಲ್ಕು ಆಟಗಳು ಬಂದಿವೆ ಎನ್ನಲಾಗುತ್ತಿದೆ. ಬೆಳಗ್ಗೆ 10-11 ಗಂಟೆಯಿಂದಲೇ ಮಟ್ಕಾ ಬರೆಯಲಾಗುತ್ತಿದೆ. ಬೆಳಗ್ಗೆ ಡೇ ಮುಂಬೈ, ಮಧ್ಯಾಹ್ನ ಡಬರಾ, ಸಂಜೆ ಕಲ್ಯಾಣಿ, ರಾತ್ರಿ ನೈಟ್ ಮುಂಬೈ ಹೀಗೆ ನಾಲ್ಕು ಆಟಗಳಿಗೂ ಬುಕ್ಕಿಗಳು ಮಟ್ಕಾ ಬರೆಯುತ್ತಿದ್ದಾರೆ.
ಸ್ಲಂ ಪ್ರದೇಶಗಳಲ್ಲಿ ಮಟ್ಕಾ ದಂಧೆ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದೆ. ಮಟ್ಕಾ ದಂಧೆ ನಡೆಸುವವರು ಪ್ರಭಾವಿ ರಾಜಕಾರಣಿಗಳ ಹಿಂಬಾಲಕರಾಗಿದ್ದಾರೆ. ಇದರಿಂದ ಬುಕ್ಕಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೈದುಲು ಅದಾವತ್ ಅವರು ಮಟ್ಕಾ ನಿಯಂತ್ರಣಕ್ಕಾಗಿ ಹಲವು ಕಠಿಣ ಕ್ರಮ ಕೈಗೊಂಡಿದ್ದರಿಂದ ಮಟ್ಕಾ ದಂಧೆಕೋರರ ಮೇಲೆ ಹಲವಾರು ಪ್ರಕರಣ ದಾಖಲು ಮಾಡಿರುವುದು ವಿಶೇಷವಾಗಿದೆ.
ಬುಕ್ಕಿಗಳ ಗಡಿಪಾರಿಗೆ ಪಟ್ಟಿ ರೆಡಿ.. ಜಿಲ್ಲೆಯಲ್ಲಿ ಮಟ್ಕಾ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾ ಪೊಲೀಸರು ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಲು ಮುಂದಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಟ್ಕಾ ಬುಕ್ಕಿಗಳನ್ನು ಗುರುತಿಸಿರುವ ಪೊಲೀಸ್ ಇಲಾಖೆ 18 ಮಟ್ಕಾ ಬುಕ್ಕಿಗಳನ್ನ ಗಡಿಪಾರು ಮಾಡಲು ಎಸ್ಪಿ ಸೈದುಲು ಅಡಾವತ್ ಪಟ್ಟಿ ಸಿದ್ಧಗೊಳಿಸಿದ್ದಾರೆ. ಮಟ್ಕಾ ಬುಕ್ಕಿಗಳಿಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ಬುಕ್ಕಿಗಳು ಎಗ್ಗಿಲ್ಲದೇ ಮಟ್ಕಾ ದಂಧೆ ನಡೆಸುತ್ತಿರುವ ಪರಿಣಾಮ ಪೊಲೀಸರು ಬುಕ್ಕಿಗಳ ಗಡಿಪಾರಿಗೆ ಪಟ್ಟಿ ರೆಡಿ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಗಡಿಪಾರಿಗೆ ಸಿದ್ಧವಾಗಿರುವ ಮಟ್ಕಾ ಬುಕ್ಕಿಗಳ ಹೆಸರುಗಳು ಇಂತಿವೆ. ಬಳ್ಳಾರಿಯ ಎಪಿಎಂಸಿ ಠಾಣಾ ವ್ಯಾಪ್ತಿಯ ಸುಂಕಪ್ಪ, ಸಲೀಂ, ರಹಮಾನ್, ಹೊನ್ನೂರು ಸಾಬ್ ಹಾಗೂ ಸಿರುಗುಪ್ಪ ಠಾಣಾ ವ್ಯಾಪ್ತಿಯ ಹುಸೇನ್ ಸಾಬ್, ವೀರಭದ್ರಗೌಡ, ಮನ್ನೂರು, ತೆಕ್ಕಲಕೋಟೆ ಠಾಣಾ ವ್ಯಾಪ್ತಿಯ ಜಬ್ಬಾರ್, ಚಿದಾನಂದ, ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸೀನಾ, ಅಂಜಿನಿ, ಹಳ್ಕೊಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಮರೇಶ್, ಗೌಸ್, ಸಿರಿಗೇರಿ ಠಾಣಾ ವ್ಯಾಪ್ತಿಯ ಅಮರೇಶ್ ವೆಂಕಟೇಶ್ ಗೌಡ, ಪಿ. ಡಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಯರಿಸ್ವಾಮಿ, ಬಳ್ಳಾರಿ ಗ್ರಾಮೀಣ ಠಾಣಾ ವ್ಯಾಪ್ತಿಯ ಗುರುಸ್ವಾಮಿ, ಸಂಡೂರು ಠಾಣೆ ವ್ಯಾಪ್ತಿಯ ಕೆ. ನಾಗರಾಜ್ ಸೇರಿ ಒಟ್ಟು 18 ಮಟ್ಕಾ ಬುಕ್ಕಿಗಳ ಪಟ್ಟಿ ಸಿದ್ಧವಾಗಿದೆ.
ನಮ್ಮ ಗಮನಕ್ಕೆ ತನ್ನಿ.. ಯಾವುದೇ ಕ್ಷಣದಲ್ಲಾದ್ರೂ ಎಸ್.ಪಿ ಸೈದಲು ಅದಾವತ್ ಬುಕ್ಕಿಗಳನ್ನು ಗಡಿಪಾರು ಮಾಡಲಿದ್ದಾರೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಟ್ಕಾ ಹಾವಳಿ ಇದೆಯೋ ಅಂತಹ ಕಡೆಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು. ಎಲ್ಲಾದರೂ ಮಟ್ಕಾ ನಡೆಯುತ್ತಿದ್ದರೆ ಅದನ್ನು ನಮ್ಮ ಗಮನಕ್ಕೆ ತನ್ನಿ, ಅಂತವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ಹೇಳಿದ್ದಾರೆ.
ಓದಿ: ಅವರ ಮೆದುಳು ಹಿಮ್ಮುಖವಾಗಿ ಚಲಿಸುತ್ತಿರಬಹುದು: ಮಹಾ ಡಿಸಿಎಂಗೆ ಹೆಚ್ಡಿಕೆ ತಿರುಗೇಟು