ಹೊಸಪೇಟೆ: ನರಹಂತಕ ಚಿರತೆ ಹಿಡಿಯಲು ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಕ್ಯಾಮೆರಾ ಟ್ರ್ಯಾಪ್ ಮೂಲಕ ಚಿರತೆ ಸ್ಥಳವನ್ನು ಕಂಡು ಹಿಡಿಯಬಹುದಾಗಿದೆ. ಈ ಕುರಿತು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಆನಂದ ಸಿಂಗ್ ಹೇಳಿದರು.
ನಗರದ ಪಟೇಲನಗರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡ್ಡಗಾಡು ಪ್ರದೇಶದಲ್ಲಿ ಚಿರತೆಯನ್ನು ಸೆರೆ ಹಿಡಿಯುವುದು ಕಷ್ಟಕರವಾಗಿದೆ. ಅದಕ್ಕೆ ಅಡಗಿಕೊಳ್ಳಲು ಗುಡ್ಡಗಾಡು ಅನುಕೂಲವಾಗಿದೆ. ಬೇರೆ ಸ್ಥಳವಾಗಿದ್ದರೆ ಶೂಟರ್ಗಳಿಗೆ ಅನುಕೂಲವಾಗುತ್ತಿತ್ತು. ಚಿರತೆ ದಾಳಿಯನ್ನು ತಡೆಯಲು ತಜ್ಞರೊಂದಿಗೆ ಚರ್ಚೆ ಮಾಡಲಾಗುವುದು ಎಂದರು.
ಓದಿ: ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ತಡೆಗೋಡೆ, ಹೊಂಡಗಳ ನಿರ್ಮಾಣ: ಸಚಿವ ಆನಂದ್ ಸಿಂಗ್
ಇಡೀ ರಾಜ್ಯದಲ್ಲಿ ಚಿರತೆ ಸಂಖ್ಯೆ ಹೆಚ್ಚಾಗಿದೆ. ಅದನ್ನು ತಡೆ ಹಿಡಿಯಬೇಕಾಗಿದೆ. ಅಲ್ಲದೇ, ನರಹಂತಕ ಚಿರತೆಗಳನ್ನು ಶೂಟೌಟ್ ಮಾಡುವ ಕುರಿತು ಚಿಂತನೆ ಮಾಡಲಾಗಿತ್ತು. ಇದಕ್ಕೆ ಪರಿಸರವಾದಿಗಳು ಆಕ್ಷೇಪಣೆ ಎತ್ತಲಿದ್ದಾರೆ. ಚಿರತೆ ಒಂದು ಸ್ಥಳದಲ್ಲಿ ದಾಳಿ ಮಾಡುತ್ತದೆ. ಕೆಲ ಗಂಟೆಗಳಲ್ಲಿ ಅದೇ ಸ್ಥಳಕ್ಕೆ ಚಿರತೆ ಬರಲಿದೆ. ಆ ಸ್ಥಳದಲ್ಲಿ ಟ್ರ್ಯಾಕ್ ಕ್ಯಾಮೆರಾ ಅಳವಡಿಸಿದರೆ ಚಿರತೆಯನ್ನು ಸುಲಭವಾಗಿ ಹಿಡಿಯಬಹುದು ಎಂದು ಅವರು ಹೇಳಿದರು.