ಬಳ್ಳಾರಿ: ಎನ್ಐಎ ದಾಳಿ ವೇಳೆ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಪಿಎಫ್ಐ ಕಾರ್ಯಕರ್ತರು ಥಳಿಸುವ ಮೂಲಕ ಪುಂಡಾಡಿಕೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಕಾರ್ಯಕರ್ತರ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಗುರುವಾರ ಬೆಳಗ್ಗೆ ರಾಷ್ಟ್ರೀಯ ತನಿಖಾ ದಳ ದೇಶದ ನಾನಾ ಕಡೆ ಪಿಎಫ್ಐ ಕಚೇರಿ ಮತ್ತು ಮುಖಂಡರ ಮನೆಗಳ ಮೇಲೆ ದಾಳಿ ಮಾಡಿತ್ತು. ಈ ವೇಳೆ ಪೊಲೀಸರ ಅನುಮತಿ ಪಡೆಯದೇ ಗುರುವಾರ ಸಂಜೆ ಏಕಾಏಕಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಟವರ್ ಕ್ಲಾಕ್ ಕಾಮಗಾರಿ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿ, ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಏಕಾಏಕಿ ಕಾರ್ಯಕರ್ತರು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದರಿಂದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಈ ಸಂದರ್ಭದಲ್ಲಿ ಯುವಕನೊಬ್ಬ ಪ್ರತಿಭಟನಾನಿರತನ್ನು ಪ್ರಶ್ನಿಸಿದ್ದು, ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.
ಆಗ ಕಾರ್ಯಕರ್ತರು ತಮ್ಮ ಗುಂಪಿನ ಮಧ್ಯೆ ಯುವಕನನ್ನು ಎಳೆದುಕೊಂಡು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಕೂಡಲೇ ಘಟನೆಯ ತೀವ್ರತೆ ಅರಿತ ಪೊಲೀಸರು ಯುವಕನನ್ನು ಕೂಡಲೇ ಪ್ರತಿಭಟನಾಕಾರರಿಂದ ರಕ್ಷಿಸಿ, ಪೊಲೀಸ್ ಠಾಣೆಗೆ ಕರೆದೊಯ್ದಿದರು.
ಓದಿ: NIA ದಾಳಿ ಖಂಡಿಸಿ ಪ್ರತಿಭಟನೆ: PFI ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿದ ಉಡುಪಿ ಪೊಲೀಸರು