ವಿಜಯನಗರ : ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ಕೆರೆ ತುಂಬಿಸೋ ಯೋಜನೆ ಜಾರಿ ಮಾಡಿದೆ. ಈಗಾಗಲೇ ಕೆರೆ ತುಂಬಿಸೋ ಕೆಲಸಕ್ಕೆ ಹಲವು ಕಡೆ ಚಾಲನೆಯೂ ದೊರೆತಿದೆ. ಕೆರೆ ತುಂಬಿಸುವ ಯೋಜನೆಯಡಿ ಗುರುತಿಸಿರುವ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಕೆರೆಯ ಮೇಲೆ ಭೂ ನುಂಗಣ್ಣರ ವಕ್ರದೃಷ್ಟಿ ಬಿದ್ದಿದೆ.
ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಬ್ಜಾ ಮಾಡಿಕೊಳ್ಳಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಹೀಗಾಗಿ, ಅಲ್ಲಿನ ಗ್ರಾಮಸ್ಥರು ಇದೀಗ ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲ, ಕೆರೆ ಉಳಿಸೋಕೆ ಹೋರಾಟವನ್ನೂ ಆರಂಭಿಸಿದ್ದಾರೆ.
ವಿಜಯನಗರ ಕಾಲದ ಅರಸರ ಕಾಲದಿಂದಲೂ ಸುಮಾರು 400 ವರ್ಷಗಳ ಹಿಂದಿನ ಇತಿಹಾಸವಿರುವ ಕೂಡ್ಲಿಗಿಯ ಪೂಜಾರಹಳ್ಳಿ ಕೆರೆಗೆ ನೀರು ತುಂಬಿಸಿದ್ರೆ, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಬೆಳೆಯುತ್ತಾರೆ. ಕೆರೆ ಸುತ್ತಮುತ್ತಲಿನ ಬೋರ್ವೆಲ್ಗಳಿಗೆ ಮರುಜೀವ ಬರುತ್ತದೆ. ಹೀಗಾಗಿ, ಈ ಕೆರೆಯನ್ನು ತುಂಬಿಸಲು ರಾಜ್ಯ ಸರ್ಕಾರ ಅನುದಾನವನ್ನು ಸಹ ನೀಡಿದೆ.
ಇಂತಹ ಕೆರೆಯನ್ನು ಕೆಲ ವ್ಯಕ್ತಿಗಳು ಕಬಳಿಸಲು ಹೊಂಚು ಹಾಕಿದ್ದಾರೆ. ಆ ಕೆರೆಯನ್ನು ರಕ್ಷಣೆ ಮಾಡುವ ಮೂಲಕ ವಿಜಯನಗರ ಜಿಲ್ಲಾಡಳಿತ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿ ಅನ್ನದಾತರು ಹಳ್ಳಿಗಳಿಂದ ಡಿಸಿ ಕಚೇರಿಗೆ ಯಾತ್ರೆಯನ್ನೇ ಮಾಡಿದ್ದಾರೆ. 207 ಎಕರೆಯಷ್ಟು ವಿಶಾಲವಾಗಿರುವ ಈ ಕೆರೆಗೆ ನೀರು ತುಂಬಿಸಲು ಸರ್ಕಾರ ಹಣ ಕೂಡ ಮಂಜೂರು ಮಾಡಿದೆ. ಇಂತಹ ಕೆರೆಯನ್ನು ಉಳಿಸೋದು ಜಿಲ್ಲಾಡಳಿತದ ಕರ್ತವ್ಯವಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.
ಓದಿ: ಬೋಳ ಗ್ರಾಮ ಪಂಚಾಯತ್ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು.. ಪಿಡಿಒ ಹೇಳಿದ್ದೇನು?