ಬಳ್ಳಾರಿ: ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ನಗರದ ರೂಪನಗುಡಿ ರಸ್ತೆಯ ಹರಿಶ್ಚಂದ್ರ ಘಾಟ್ ಬಳಿ ನಡೆದಿದೆ.
ಮೂಲತಃ ನಗರದ ಕೋಟೆ ಪ್ರದೇಶದ ನಿವಾಸಿಯಾದ ಪಿ-1,185 ಕಳೆದ ಕೆಲ ದಿನಗಳಿಂದ ಸತ್ಯನಾರಾಯಣಪೇಟೆಯ ಗಣೇಶ ಕಾಲೋನಿಯಲ್ಲಿ ವಾಸವಾಗಿದ್ದರು. ಕಳೆದ ಏಪ್ರಿಲ್ನಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇವರು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಕಳೆದ ಭಾನುವಾರ ಕೊರೊನಾ ಪಾಸಿಟಿವ್ ಬಂದಿತ್ತು. ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹೀಗಾಗಿ ರೂಪನಗುಡಿ ರಸ್ತೆಯ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಈ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿಗೆ ಕೊರೊನಾ ಬಾಧಿಸಿದ್ದು ಹೌದು. ಆದರೆ ಆತ ಕೊರೊನಾ ಸೋಂಕಿನಿಂದ ಮೃತಪಟ್ಟಿಲ್ಲ. ಇತರ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮನವರಿಕೆ ಮಾಡಿಕೊಟ್ಟರೂ ಸ್ಥಳೀಯರು ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದರು.
ಕೊನೆಗೆ ಪೊಲೀಸರು ಜನರೊಂದಿಗೆ ಮಾತುಕತೆ ನಡೆಸಿ, ಜಿಲ್ಲಾಡಳಿತದ ಆದೇಶದಂತೆ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಇದಕ್ಕೆ ಯಾರೂ ಕೂಡ ವಿರೋಧ ವ್ಯಕ್ತಪಡಿಸುವಂತಿಲ್ಲ ಎಂದು ಮನವೊಲಿಸಿದರು. ಬಳಿಕ 8 ಅಡಿ ಆಳದ ಗುಂಡಿ ತೆಗೆದು ಅಂತ್ಯ ಸಂಸ್ಕಾರ ಮಾಡಲಾಯಿತು.