ಹೊಸಪೇಟೆ(ವಿಜಯನಗರ) : ವಿಜಯನಗರ ಜಿಲ್ಲೆಯಲ್ಲಿ ಪೆಟ್ರೋಲ್ ದರ ಶತಕ ದಾಟಿದ್ದು ಡೀಸೆಲ್ ದರ 100 ರೂ. ಸನಿಹದಲ್ಲಿದೆ. ತೈಲ ದರ ಹೆಚ್ಚಳದಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಘೋಷಣೆಯಾದಾಗಿನಿಂದಲೂ ಪೆಟ್ರೋಲಿಯಂ ದರಗಳು ಏರುತ್ತಿವೆ. ಜೂನ್ 26ರಂದು ಇಂಡಿಯನ್ ಬಂಕ್ನಲ್ಲಿ ಪೆಟ್ರೋಲ್ ದರ 102.61 ಪೈಸೆ ಇದೆ. ಇನ್ನು, ಡೀಸೆಲ್ 95.13 ಪೈಸೆ ಇದೆ. ಭಾರತ್ ಬಂಕ್ದಲ್ಲಿ ಪೆಟ್ರೋಲ್ ದರ ಲೀಟರ್ಗೆ 102.65 ಪೈಸೆ ಇದ್ದು, ಡೀಸೆಲ್ ದರ 95 ರೂ. ಅಸುಪಾಸಿನಲ್ಲಿದೆ. ಹಾಗಾಗಿ, ದರ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.
ತೈಲ ದರ ಹೆಚ್ಚಳದಿಂದ ಸಾಗಣೆ ವೆಚ್ಚ ಕೂಡ ಹೆಚ್ಚಾಗುತ್ತಿದೆ. ಇದರಿಂದಾಗಿ ಅಡುಗೆ ಎಣ್ಣೆ, ತರಕಾರಿ, ದಿನಸಿ ಸಾಮಗ್ರಿಗಳ ದರಗಳು ಸರ್ವೇ ಸಾಮಾನ್ಯವಾಗಿ ಏರಿಕೆ ಕಾಣುತ್ತಿವೆ. ದರ ಏರಿಕೆ ಜನಸಾಮಾನ್ಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಗಾಯದ ಮೇಲೆ ಬರೆ : ಸತತ ಎರಡು ವರ್ಷಗಳಿಂದ ಜನರು ಕೋವಿಡ್‌ನಿಂದ ತತ್ತರಿಸಿ ಹೋಗಿದ್ದಾರೆ. ಲಾಕ್ಡೌನ್ನಿಂದ ವ್ಯಾಪಾರ, ವಹಿವಾಟು ನಿಂತು ಹೋಗಿದೆ. ಕೆಲ ದಿನಗಳಿಂದ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದರ ಏರಿಕೆ ಮಾಡುತ್ತಿರುವುದು ಸರಿ ಅಲ್ಲ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಅಧ್ಯಕ್ಷ ಆರ್.ಭಾಸ್ಕರ್ ರೆಡ್ಡಿ ಅವರು, ಈ ಹಿಂದೆ ಬಿಜೆಪಿ ಅವರು ಪೆಟ್ರೋಲಿಯಂ ದರ 60 ರೂ. ಆಗಿದ್ದನ್ನು ಖಂಡಿಸಿ, ನಾವು ಅಧಿಕಾರಕ್ಕೆ ಬಂದರೆ 50 ರೂ. ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈಗ ಬಿಜೆಪಿ ಅವರು 102 ರೂ. ಪೆಟ್ರೋಲ್ ದರ ಮಾಡಿದ್ದಾರೆ. ಈಗ ಬ್ಯಾರೆಲ್ ಬೆಲೆ ಕಡಿಮೆಯಾಗಿದೆ. ಆದರೂ ಸಹ ದರ ಹೆಚ್ಚಳ ಮಾಡುತ್ತಿದ್ದಾರೆ. ಪೆಟ್ರೋಲಿಯಂ ದರಗಳು 200 ರೂ. ಸಮೀಪ ಬಂದರೂ ಸಹ ಅಚ್ಚರಿ ಪಡಬೇಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೊಸಪೇಟೆ ಮರಡಿ ಜಂಬಯ್ಯ ನಾಯಕ್ ಅವರು ಮಾತನಾಡಿ, ಪೆಟ್ರೋಲಿಯಂ ದರ ಏರಿಕೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗುತ್ತಿದೆ. ಸಾಗಣೆ ವೆಚ್ಚ ಹೆಚ್ಚಳದಿಂದ ದರಗಳಲ್ಲಿ ಏರುಪೇರಾಗುತ್ತಿದೆ. ಕೈಗಾರಿಕೆ, ಕೃಷಿ, ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿದೆ. ಸಾಮಾನ್ಯ ಜನರು ಜೀವನ ಸಾಗಿಸಲು ಕಷ್ಟಪಡುವಂತಾಗಿದೆ. ಉದ್ದೇಶ ಪೂರ್ವಕವಾಗಿ ದರವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.