ಬಳ್ಳಾರಿ: ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶದಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆ ಗಣಿನಾಡಿನ ಸಿನಿಮಾ ಮಂದಿದಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಥಿಯೇಟರ್ ಮಾಲೀಕರು ರೇಷನ್ ವಿತರಿಸುವ ಮೂಲಕ ಮಾನವೀಯತೆ ಮೆರದಿದ್ದಾರೆ.
ಲಾಕ್ಡೌನ್ ಆಗಿದ್ದರಿಂದ ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಬಡ ಕೂಲಿ ಕಾರ್ಮಿಕರು ದಿನಗೂಲಿ ಇಲ್ಲದೇ ಊಟಕ್ಕಾಗಿ ಪರದಾಡುದನ್ನ ಮನಗಂಡ ಬಳ್ಳಾರಿ ನಗರದ ನಟರಾಜ ಚಿತ್ರಮಂದಿರದ ಮಾಲೀಕ ಲಕ್ಷ್ಮೀಕಾಂತ ರೆಡ್ಡಿ, ತಮ್ಮ ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಎಪ್ಪತ್ತು ಮಂದಿ ಕೂಲಿ ಕಾರ್ಮಿಕರಿಗೆ 25 ಕೆಜಿಯ ಒಂದು ಮೂಟೆ ಅಕ್ಕಿ, ಎಣ್ಣೆ ಹಾಗೂ ಬೇಳೆ ಸೇರಿದಂತೆ ಇನ್ನಿತರೆ ಮನೆ ಬಳಕೆ ಸಾಮಾಗ್ರಿಗಳನ್ನ ನೀಡಿ ಮಾನವೀಯತೆ ಮೆರೆದಿದ್ದಾರೆ.
ಸಿನಿಮಾ ಮಂದಿರಗಳು ಶುರುವಾದಾಗ ಕೂಲಿ ಕಾರ್ಮಿಕರು ನಮ್ಮ ಬಾಳ ಬುತ್ತಿಯನ್ನ ತುಂಬಿಸಿದ್ದಾರೆ. ಆದರೀಗ ಕೊರೊನಾ ವೈರಸ್ ಎಫೆಕ್ಟ್ ದಿನಸಿ ಕೊಳ್ಳಲೂ ಅವರ ಬಳಿ ಹಣವಿರದಂತೆ ಮಾಡಿದೆ. ಹಾಗಾಗಿ ನಾನೀಗ ಅವರ ಬಾಳ ಬುತ್ತಿಯನ್ನ ತುಂಬಲು ಮುಂದಾಗಿರುವೆ ಅಷ್ಟೆ ಎಂದು ಚಿತ್ರಮಂದಿರ ಮಾಲೀಕ ಲಕ್ಷ್ಮೀಕಾಂತ್ ರೆಡ್ಡಿ ಹೇಳಿಕೊಂಡಿದ್ದಾರೆ.