ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಗಣಿನಗರಿಯ ಗಣ್ಯರು ಅತೀವ ವಿರೋಧ ವ್ಯಕ್ತಪಡಿಸಿದ್ದಾರೆ. ಭೌಗೋಳಿಕ ಕಾರಣವೊಡ್ಡಿ ಗಣಿನಾಡನ್ನು ವಿಭಜನೆ ಮಾಡಲು ಕೆಲ ಪಟ್ಟಭದ್ರ ಹಿತಾಸಕ್ತರು ಮುಂದಾಗಿದ್ದಾರೆ.
ಪಶ್ಚಿಮ ತಾಲೂಕುಗಳಿಂದ ಜಿಲ್ಲಾ ಕೇಂದ್ರವಾದ ಗಣಿನಗರಿಗೆ ಸಂಪರ್ಕ ಸಾಧಿಸಲು ಸಾರ್ವಜನಿಕರು ಹೆಣಗಾಡಬೇಕಾಗುತ್ತೆ ಎಂತಲೂ ಕೆಲವರು ತಮ್ಮ ಸ್ವಾರ್ಥಪರತೆಗೆ ಈ ರೀತಿಯ ಗುಲ್ಲೆಬ್ಬಿಸುತ್ತಿದ್ದಾರೆ. ಅನರ್ಹ ಶಾಸಕ ಆನಂದಸಿಂಗ್ ಅವರ ನೇತೃತ್ವದಲ್ಲಿ ಈ ನಾಡಿನ ಮಠಾಧೀಶರು ಹಾಗೂ ನಾನಾ ರಾಜಕೀಯ ಪಕ್ಷದ ಮುಖಂಡರ ನಿಯೋಗವು ತೆರಳಿ, ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿ ರಚಿಸುವಂತೆ ಈಗಾಗಲೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದಾರೆ.
ಅದಕ್ಕೆ ಸಮ್ಮತಿಸಿದ ಸಿಎಂ ಯಡಿಯೂರಪ್ಪ, ಸಚಿವ ಸಂಪುಟದಲ್ಲಿ ಚರ್ಚಿಸುವ ವಿಷಯವನ್ನಾಗಿಸುವ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಯವರಿಗೆ ಸೂಚನಾ ಪತ್ರವನ್ನು ಬರೆದಿದ್ದಾರೆ. ಜಿಲ್ಲೆಯ ಸ್ವಪಕ್ಷದ ಜನ ಪ್ರತಿನಿಧಿಗಳೇ ಸಿಎಂ ಬಿಎಸ್‌ವೈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅನರ್ಹ ಶಾಸಕರ ಮುಲಾಜಿಗೆ ಸಿಲುಕಿದ ಈ ಸರ್ಕಾರ, ಮತ್ತೊಂದೆಡೆ ಸ್ವಪಕ್ಷೀಯ ಶಾಸಕರ, ಸಚಿವರ ವಿರೋಧವನ್ನೂ ಎದುರಿಸುವಂತಾಗಿದೆ. ಅಲ್ಲದೇ, ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಕೆಂಗಣ್ಣಿಗೂ ಸಿಎಂ ಗುರಿಯಾಗುತ್ತಿದ್ದಾರೆ.
ಸಾಮಾಜಿಕ ಚಿಂತಕ ಡಾ.ಅರವಿಂದ ಪಾಟೀಲ್ ಈಟಿವಿ ಭಾರತದೊಂದಿಗೆ ಮಾತನಾಡಿ, ಇದೊಂದು ರಾಜಕೀಯ ದುರುದ್ದೇಶದ ನಿರ್ಧಾರ. ಆ ಭಾಗದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದು ಕಟು ಸತ್ಯ. ಇಂತಹ ನಿರ್ಧಾರಗಳಿಗೆ ಜನಸಾಮಾನ್ಯರು ಯಾವತ್ತಿಗೂ ಮಣೆ ಹಾಕಬಾರದು ಎಂದು ಪಾಟೀಲ್ ಮನವಿ ಮಾಡಿದ್ದಾರೆ. ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನಾಗಿಸುವ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕಾನೂನಾತ್ಮಕವಾಗಿ ತೊಡಕನ್ನು ಎದುರಿಸಬಹುದು ಎಂದು ಹಾಲಿ ಕಾಂಗ್ರೆಸ್ ಶಾಸಕ ಪಿ ಟಿ ಪರಮೇಶ್ವರ ನಾಯ್ಕ ಸಂಶಯ ವ್ಯಕ್ತಪಡಿಸಿದ್ದಾರೆ.
ಇನ್ನು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ವಿ.ರವಿಕುಮಾರ ಮಾತನಾಡಿ, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ನಿರ್ಧಾರ ಸರಿಯಲ್ಲ. ಪಶ್ಚಿಮ ತಾಲೂಕುಗಳನ್ನು ಒಗ್ಗೂಡಿಸಿ ಪ್ರತ್ಯೇಕ ಜಿಲ್ಲೆಯ ರಚನೆಗೆ ನನ್ನ ವಿರೋಧವಿಲ್ಲ.ಆದರೆ, ಹೊಸಪೇಟೆ-ಬಳ್ಳಾರಿಗೂ ಕೇವಲ 60 ಕಿಲೋಮೀಟರ್ ಹಾಗೂ ಹೊಸಪೇಟೆ-ಕೊಪ್ಪಳಕ್ಕೂ ಕೇವಲ 25 ಕಿಲೋ ಮೀಟರ್ ಮಾತ್ರ. ಈ ಉಭಯ ಜಿಲ್ಲೆಗಳ ಮಧ್ಯೆ ಹೊಸಪೇಟೆ ಇದೆ. ಹೀಗಾಗಿ, ಹೊಸಪೇಟೆ ಜಿಲ್ಲೆಯನ್ನಾಗಿ ರಚಿಸೋದು ಬೇಡ ಎಂದರು.
ಗಣಿ ಉದ್ಯಮಿ ಟಪಾಲ್ ಗಣೇಶ ಅವರು ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಹಾಗೂ ನೆರೆ ಹಾವಳಿಯಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಮಾಡೋದು ಎಷ್ಟು ಸರಿ. ಅಲ್ಲದೇ, ಸಿಎಂ ಬಿಎಸ್‌ವೈ ಇಷ್ಟೊಂದು ತರಾತುರಿಯಲ್ಲಿ ಸಚಿವ ಸಂಪುಟದ ಮುಂದೆ ಚರ್ಚಿಸೋದು ಯಾಕೆ ಅಂತಾನೂ ಗೊತ್ತಿಲ್ಲ. ನಿಮಗೇನಾದ್ರೂ ತಾಕತ್ತಿದ್ದರೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ನೋಡೋಣ ಎಂದು ಸಿಎಂ ಬಿಎಸ್ವೈಗೆ ಸವಾಲೆಸೆದಿದ್ದಾರೆ.