ಬಳ್ಳಾರಿ: ವಿಜಯನಗರ ಕ್ಷೇತ್ರದ ಅನರ್ಹ ಶಾಸಕ ಆನಂದಸಿಂಗ್ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಕಾಂಗ್ರೆಸ್ನಿಂದ ಗೆದ್ದು, ಈಗ ಅಧಿಕಾರದ ಆಸೆಗೆ ಬಿಜೆಪಿ ಸೇರಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರಿಗೆ ಜನ ಖಂಡಿತವಾಗಿಯೂ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದರು. ನಾನು ನನ್ನ ಉಸಿರು ಇರುವವರೆಗೆ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಆನಂದ್ ಸಿಂಗ್ ಹೇಳಿದ್ದರು. ಈಗ ಇದ್ದಕ್ಕಿದಂತೆ ಬಿಜೆಪಿ ಸೇರಿದ್ದಾರೆ. ಅವರು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಅನರ್ಹರ ಕ್ಷೇತ್ರಗಳಲ್ಲಿ ಸಾಕಷ್ಟು ಜನಾಕ್ರೋಶವಿದೆ. ಜನ ಅವರನ್ನು ಸೋಲಿಸಲು ತೀರ್ಮಾನಿಸಿದ್ದಾರೆ ಎಂದರು.
ಇನ್ನು ಸಚಿವ ಬಿ.ಸಿ.ಪಾಟೀಲ್ ಬಗ್ಗೆ ಮಾತನಾಡಿದ ಅವರು , ಅವನಿಗೆ ಜ್ಞಾನವಿಲ್ಲ. ನಾನು ಪಕ್ಷಾಂತರ ಮಾಡಿಲ್ಲ. ಅವನಿಗೆ ಅದು ಅರ್ಥವಾಗುತ್ತಿಲ್ಲ. ನನ್ನನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದರು. ಆಗ ಸೋನಿಯಾ ಗಾಂಧಿ ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡಿದರು. ನಾನಾಗ ಜೆಡಿಎಸ್ ಪಕ್ಷ ಬಿಡಲಿಲ್ಲ. ಸೋಲಿನ ಹತಾಸೆ ಯಿಂದ ಬಿ.ಸಿ.ಪಾಟೀಲ್ ಹಾಗೇ ಹೇಳುತ್ತಿದ್ದಾರೆ. ನಾನು ಎಷ್ಟು ಕೋಟಿಗೂ ಮಾರಾಟವಾಗಿಲ್ಲ. 15 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಪಾಪ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾರೆ. ಅವರು ಅನರ್ಹರ ಪರ ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದರು.