ಹೊಸಪೇಟೆ: ಶಿರಾ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಸಿಂಪತಿಗಾಗಿ ಡಿಕೆ ಶಿವಕುಮಾರ್ ಮೇಲಿನ ರೈಡ್ ಕುರಿತು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ಮೇಲೆ ರೈಡ್ ಆಗಿಲ್ಲವೇ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಗರದ ಬಿಜೆಪಿ ಕಚೇರಿಯಲ್ಲಿಂದು ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಪಾಲ್ಗೊಂಡಿದ್ದರು.
ಸಭೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸೀಟ್ ಗೆದ್ದಿದೆ. ಇದನ್ನು ಹೇಳಿಕೊಳ್ಳಲು ಅವರಿಗೆ ನಾಚಿಕೆ ಆಗುತ್ತಿಲ್ಲ. ಶಿರಾ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಡಿಕೆಶಿ ಮನೆ ದಾಳಿ ಕುರಿತು ಪ್ರಸ್ತಾಪಿಸುತ್ತಿದ್ದಾರೆ. ಡಿಕೆಶಿ ಜೈಲಿನಿಂದ ಹೊರ ಬಂದಾಗ ಮೆರವಣಿಗೆ ಮಾಡಿರುವುದನ್ನು ಜನರ ಮುಂದೆ ಹೇಳಲಿ. ಕಾಂಗ್ರೆಸ್ ಸರ್ಕಾರ ಇದ್ದಾಗ ಬಿಜೆಪಿ ಶಾಸಕರ ಮೇಲೆ ರೈಡ್ ಮಾಡಿಲ್ವಾ? ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದರು ಎಂದು ಕಿಡಿಕಾರಿದರು.
ಸಚಿವ ಆನಂದ್ ಸಿಂಗ್ ಮಾತನಾಡಿ, ವಿಜಯನಗರ ಬಿಜೆಪಿ ಭದ್ರಕೋಟೆ. ಕಾರ್ಯಕರ್ತರು ಇದು ಮೊದಲನೇ ಚುನಾವಣೆ ಎಂಬಂತೆ ಕೆಲಸ ಮಾಡಬೇಕು. ಬೇರೆ ಪಕ್ಷದವರಿಗೆ ಲಾಭವನ್ನು ಮಾಡಿಕೊಡಬಾರದು. ಶಶೀಲ್ ನಮೋಶಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಸಾಮಾಜಿಕ ಅಂತರ ಮಾಯ: ಇಬ್ಬರು ಸಚಿವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಗುಂಪು ಗುಂಪಾಗಿ ಸೇರಿಕೊಂಡಿದ್ದರು.