ಹೊಸಪೇಟೆ (ವಿಜಯನಗರ): ಒಂದೂವರೆ ತಿಂಗಳಿನ ಹಿಂದಷ್ಟೇ ವಿವಾಹವಾಗಿದ್ದ ಯುವಕ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಬಳಿ ಭಾನುವಾರ ನಡೆದಿದೆ. ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಅಮರ್ ಬಿರಾದಾರ್(35) ಮೃತರು.
ಲಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಅಮರ್ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಕಾರ್ನಲ್ಲಿ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ತನ್ನೂರಾದ ಡೊಂಗರಗಿ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಕಾರ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರ್ ಚಾಲನೆ ಮಾಡುತ್ತಿದ್ದ ಅಮರ್ ಬಿರಾದಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಗೆ ಕಾರ್ ಡಿಕ್ಕಿ ಹೊಡೆದಿರುವುದು ತಿಳಿದಿದ್ದರೂ ಲಾರಿ ನಿಲ್ಲಿಸದೇ ಹೋಗಿದ್ದ ಚಾಲಕನನ್ನು ಹೈವೇ ಪೆಟ್ರೋಲಿಂಗ್ ಪೊಲೀಸರು ಚಿಲಕನಹಟ್ಟಿ ಟೋಲ್ ಬಳಿ ತಡೆದಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಭೀಕರ ಅಪಘಾತ: ಸ್ಯಾಂಡಲ್ವುಡ್ ನಟ ಸಂಚಾರಿ ವಿಜಯ್ ಸ್ಥಿತಿ ಗಂಭೀರ
ಘಟನಾ ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ವಸಂತ ವಿ.ಅಸೋದೆ ಸೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಮರ್ ಬಿರಾದಾರ್ ಅವರ ಮೃತದೇಹವನ್ನು ಅವರ ಸಂಬಂಧಿಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.