ಬಳ್ಳಾರಿ: ಜಿಲ್ಲೆಯಲ್ಲಿ ಉಂಟಾದ ನೆರೆ ಹಾವಳಿ ಪರಿಹಾರ ಕಾರ್ಯ ಕೈಗೆತ್ತಿಕೊಂಡಿದ್ದು, ಹಂತ, ಹಂತವಾಗಿ ಪರಿಹಾರ ವಿತರಣೆ ನಡೆದಿದೆ ಎಂದು ಜಿಲ್ಲಾಧಿಕಾರಿ ನಕುಲ್ ಎಸ್.ಎಲ್. ತಿಳಿಸಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡಾಂಗಣ ಅಭಿವೃದ್ಧಿಯನ್ನು ಜ. 26ರ ಒಳಗೆ ಪೂರ್ಣಗೊಳಿಸಲಾಗುವುದು. ತುಂಗಾಭದ್ರ ನದಿ ಪಾತ್ರದಲ್ಲಿನ ಅಚ್ಚೊಳ್ಳಿ ಮತ್ತು ಬ್ಯಾಲಹುಣಸಿ ಗ್ರಾಮಗಳ ಸ್ಥಳಾಂತರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ನೆರೆ ಹಾವಳಿಯಿಂದ 657 ಮನೆಗಳು ಹಾನಿಯಾಗಿದ್ದು, ₹18.47 ಲಕ್ಷ ಪರಿಹಾರ ನೀಡಲಾಗಿದೆ. 4,267 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ₹11 ಲಕ್ಷ ಪರಿಹಾರವನ್ನು ತುರ್ತಾಗಿ ನೀಡಲಾಗಿದೆ. ಸಮೀಕ್ಷೆ ನಂತರ ಸೂಕ್ತ ಪರಿಹಾರವನ್ನು ನೀಡಲಾಗುತ್ತದೆ ಎಂದರು.
934 ವಿದ್ಯುತ್ ಕಂಬಗಳು, 203 ಟ್ರಾನ್ಸ್ಫಾರ್ಮರ್ಗಳು ಜಿಲ್ಲೆಯಲ್ಲಿ ಹಾನಿಗೊಳಗಾಗಿವೆ. ಸಾರ್ವಜನಿಕರ ಮೂಲಭೂತ ಸೌಲಭ್ಯಗಳ ಹಾನಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಭರಿಸಲಾಗುವುದು. ತುಂಗಭದ್ರಾ ಜಲಾಶಯದಿಂದ ಅತಿ ಹೆಚ್ಚು ನೀರು ಹೊರಬಿಟ್ಟಾಗ ಕಂಪ್ಲಿ ಮತ್ತು ಗಂಗಾವತಿ ಸೇತುವೆ ಮೇಲೆ ನೀರು ಹರಿಯುತ್ತದೆ. ಸಂಚಾರಕ್ಕೂ ತೊಂದರೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.