ಬಳ್ಳಾರಿ: ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಂದಿನಿ ಹಾಲಿನ ಉತ್ಪನ್ನಗಳನ್ನು ಪರಿಚಯಿಸುವ ಸಲುವಾಗಿಯೇ ನಂದಿನಿ ಗ್ರಾಮೀಣ ಸಂಚಾರಿ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದ್ದು, ಈ ವಾಹನಗಳು ಪ್ರತಿದಿನ ಆಯಾ ಜಿಲ್ಲೆಗಳ ವ್ಯಾಪ್ತಿಯ ಪಟ್ಟಣ-ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಲಿವೆ.
ನಂದಿನಿ ಪ್ಲೆಕ್ಸಿ, ತೃಪ್ತಿ, ಹೆಲ್ತಿಲೈಫ್ ಹಾಲು ಹಾಗೂ ಇತರೆ ಹಾಲಿನ ಉತ್ಪನ್ನಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಪರಿಚಯಿಸುವ ಹಾಗೂ ಮಾರಾಟ ಮಾಡುವ ಉದ್ದೇಶದೊಂದಿಗೆ ಗ್ರಾಮೀಣ ಸಂಚಾರಿ ವಾಹನಗಳನ್ನು ನಿಯೋಜಿಸಲಾಗಿದೆ. ರಾಬಕೊ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಕೊಪ್ಪಳ ಜಿಲ್ಲೆಯ ಬೂದಗುಂಪ ಕ್ರಾಸ್ ಬಳಿ ಇರುವ ನೂತನ ಹಾಲಿನ ಡೈರಿಯಲ್ಲಿ ಪ್ರತಿ ದಿನ 60,000ರಿಂದ 1 ಲಕ್ಷ ಲೀಟರ್‌ವರೆಗೆ ವಿಸ್ತರಿಸಬಹುದಾದ ಯುಹೆಚ್‌ಟಿ ಪ್ಲೆಕ್ಸಿ ಪ್ಯಾಕ್ ಘಟಕದಲ್ಲಿ ಡಿಸೆಂಬರ್ 2019ರಿಂದ ನಂದಿನಿ ತೃಪ್ತಿ ಟೋನ್ಡ್ ಹಾಲು ಹಾಗೂ ನಂದಿನಿ ಹೆಲ್ತಿ ಲೈಫ್ ಡಬಲ್ ಟೋನ್ಡ್ ಹಾಲನ್ನು 500 ಎಂಎಲ್, 180 ಎಂಎಲ್ ಪ್ಯಾಕ್ ಮಾಡಿ ವಿತರಣೆ ಮಾಡಲಾಗುವುದೆಂದು ರಾಬಕೊ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಎಲ್‌ಬಿಪಿ ಭೀಮಾನಾಯ್ಕ ತಿಳಿಸಿದ್ದಾರೆ.
ನಂದಿನಿ ಗ್ರಾಮೀಣ ಸಂಚಾರಿ ವಾಹನದಿಂದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಅಂಗಡಿ, ಬೇಕರಿ, ಹೋಟೆಲ್ ಮತ್ತು ಗ್ರಾಹಕರಿಗೆ ವಿತರಿಸಲು ಪ್ರತಿದಿನ ಒಂದೊಂದು ತಾಲೂಕಿನ ಗ್ರಾಮೀಣ ಭಾಗದಲ್ಲಿ ಈ ವಾಹನ ಸಂಚರಿಸಲಿದ್ದು, ಮೈಕ್ ಮುಖೇನ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಲಭ್ಯತೆಯ ಕುರಿತು ವ್ಯಾಪಾಕ ಪ್ರಚಾರ ಮಾಡಲು ಉದ್ದೇಶಿಸಲಾಗಿದೆ.
ನಂದಿನಿ ತೃಪ್ತಿ ಹಾಗೂ ಹೆಲ್ತಿ ಲೈಫ್ ಹಾಲು ಐದು ಪದರಿನ ಪ್ಯಾಕೇಟ್‌ನಿಂದ ತಯಾರಿಸಲ್ಪಟ್ಟಿದೆ. ಪ್ಯಾಕೇಟ್ ತೆರೆಯೋವರೆಗೂ ಫ್ರಿಡ್ಜ್‌ನಲ್ಲಿ ಇಡುವ ಅವಶ್ಯಕತೆ ಇರೋದಿಲ್ಲ. 90 ದಿನಗಳ ದೀರ್ಘ ಕಾಲದ ಬಾಳಿಕೆಯ ಹಾಲು ಇದಾಗಿರುತ್ತದೆ. ಯಾವುದೇ ಪ್ರಿಸರ್ವೇಟೆಡ್ ಉತ್ಪನ್ನ ಇದಾಗಿರೋದಿಲ್ಲ ಎಂದು ಶಾಸಕ ಭೀಮಾ ನಾಯ್ಕ ವಿವರಿಸಿದರು.
ನಂದಿನಿ ಮಾರುಕಟ್ಟೆ ವ್ಯವಸ್ಥೆಗೆ ಮೇಜರ್ ಸರ್ಜರಿ:
ಕೆಎಂಎಫ್ ಹಾಲು ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಗೆ ಮೇಜರ್ ಸರ್ಜರಿ ಮಾಡಲು ಉದ್ದೇಶಿಸಲಾಗಿದ್ದು, ಹಂತ ಹಂತವಾಗಿ ಅದನ್ನು ಮಾಡಲಾಗುವುದು. ಗುಣಮಟ್ಟದ ಹಾಲು ಪೂರೈಕೆಯೇ ನಮ್ಮ ಒಕ್ಕೂಟದ ಪ್ರಮುಖ ಧ್ಯೇಯೋದ್ದೇಶವಾಗಿರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳ ಹಾಲು ಮಾರಾಟ ಜಾಸ್ತಿಯಾಗಿದೆ. ಅದನ್ನು ತಡೆದು, ಕೆಎಂಎಫ್ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಭೀಮಾನಾಯ್ಕ ಹೇಳಿದರು.