ಬಳ್ಳಾರಿ: ನಿಗದಿತ ಅವಧಿಯೊಳಗೆ ರಸ್ತೆ ಕಾಮಗಾರಿ ಮುಕ್ತಾಯಗೊಳಿಸಿ. ಇಲ್ಲದಿದ್ದರೇ ರಸ್ತೆ ಕುರಿತು ಸರ್ಕಾರಕ್ಕೆ ದೂರು ನೀಡಿ ನಿಮ್ಮ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವೆ ಎಂದು ಶಾಸಕ ಜಿ. ಸೋಮಶೇಖರ್ ರೆಡ್ಡಿ ಗ್ಯಾಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಬಳ್ಳಾರಿ ನಗರದಲ್ಲಿ ಆಯೋಜಿಸಿದ್ದ ಬಳ್ಳಾರಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಸೇತುವೆಗಳು, ರಸ್ತೆಗಳು ಹಾಗೂ ಕಟ್ಟಡ ನಿರ್ಮಾಣಗಳ ಸಂಬಂಧ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಹಾದು ಹೋಗುವ ಗುತ್ತಿಯಿಂದ ಅಂಕೋಲದವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಗತಿ ಪರಿಶೀಲನೆ ಮತ್ತು ಬಳ್ಳಾರಿಯಿಂದ ಹೊಸಪೇಟೆ ರಸ್ತೆಯ ಮಾರ್ಗದ ವೇಣು ವೀರಾಪುರ ಹತ್ತಿರ ಮತ್ತು ಬಿಟಿಪಿಎಸ್(BTPS) ಹತ್ತಿರ ರಸ್ತೆಗಳ ಕಾಮಗಾರಿಯ ಬಗ್ಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಇಂದು ಪರಿಶೀಲನೆ ಮಾಡಿದರು.
ಇಲ್ಲಿಯವರೆಗೆ ಬಳ್ಳಾರಿಯಿಂದ ಹೊಸಪೇಟೆ ರಸ್ತೆಯವರೆಗೆ 28% ರಷ್ಟು ಕಾಮಗಾರಿಯಾಗಿದೆ. ಫೆಬ್ರವರಿಯೊಳಗೆ 40 % ರಷ್ಟು ಮುಗಿಸುತ್ತೇವೆ. 2020 ಫೆಬ್ರವರಿಯಿಂದ ಒಂದು ವರ್ಷದೊಳಗೆ ಸಂಪೂರ್ಣ ಮುಗಿಸಿ ಕೊಡುವ ಭರವಸೆಯನ್ನು ಗ್ಯಾಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನೀಡಿದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಗ್ಯಾಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಧಿಕಾರಿಗಳಿಗೆ ರಸ್ತೆ ಕಾಮಗಾರಿ ಬೇಗ ಮುಗಿಸಿ, ಜನರಿಗೆ ಅನುಕೂಲವಾಗುವ ಕೆಲಸ ಮಾಡಿ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ತಾಕೀತು ಮಾಡಿದ್ದಾರೆ.