ಬಳ್ಳಾರಿ: ತಾಲೂಕಿನ ಬಿ.ಬೆಳಗಲ್ಲು ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ರೈತರ ಜಮೀನಿನಲ್ಲಿ ಬದು ನಿರ್ಮಾಣದ ಮಾಸಾಚರಣೆ ಹಾಗೂ ಅಭಿಯಾನಕ್ಕೆ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಚಾಲನೆ ನೀಡಿದರು. ಇದೇ ವೇಳೆ, ಕೂಲಿ ಕಾರ್ಮಿಕರಿಗೆ ಮಾಸ್ಕ್ಗಳನ್ನು ಮತ್ತು ಸ್ಯಾನಿಟೈಸರ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಭೀತಿ ಇರುವುದರಿಂದ ಜನರೆಲ್ಲರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ, ಹಾಗೆ ನಿಮ್ಮ ಮನೆ ಮತ್ತು ಊರುಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.
ಪ್ರತಿ ಹೊಲದಲ್ಲಿ ಬದು ರೈತನ ಮುಖದಲ್ಲಿ ನಗು. ಪ್ರತಿಯೊಂದು ಕುಟುಂಬಕ್ಕೂ ಕೆಲಸ ಪ್ರತಿ ಹೊಲಕ್ಕೂ ಬದು ಎಂಬ ಉದ್ದೇಶದಲ್ಲಿ ಈ ಬದು ನಿರ್ಮಾಣದ ಮಾಸಾಚರಣೆ ಮತ್ತು ಅಭಿಯಾನವನ್ನು ಕೈಗೊಳ್ಳಲಾಗಿದೆ. ಬದು ನಿರ್ಮಾಣದಿಂದ ಮಣ್ಣಿನ ಸವಕಳಿ ನಿಯಂತ್ರಣ, ತೇವಾಂಶ ಹೆಚ್ಚಾಗುವುದರಿಂದ ಶೇ.10 ರಿಂದ 15ರಷ್ಟು ಅಧಿಕ ಬೆಳೆ ಇಳುವರಿ ಬರಲಿದೆ ಎಂದರು.
ಅಲ್ಲದೆ ಕಂದಕ ಬದು ನಿರ್ಮಿಸಿಕೊಳ್ಳಲು ಪ್ರತಿ ಎಕರೆಗೆ ಗರಿಷ್ಠ 13 ಸಾವಿರ ಆರ್ಥಿಕ ನೆರವು, ಒಂದು ಎಕರೆ ಪ್ರದೇಶದಲ್ಲಿ 100 ಮೀ. ಬದು ನಿರ್ಮಾಣದಿಂದ ಪ್ರತಿ ಹದ ಮಳೆಗೆ ಅಂದಾಜು 2 ಲಕ್ಷ ಲೀ. ಮಳೆ ನೀರು ಸಂಗ್ರಹ, ಬದುವಿನ ಮೇಲೆ ಹುಲ್ಲು, ತೋಟಗಾರಿಕೆ/ಅರಣ್ಯ ಸಸಿಗಳನ್ನು ನಾಟಿಮಾಡಿದಲ್ಲಿ ಬದುಗಳ ಸ್ವೀಕರಣ ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ನಿಮ್ಮೂರಲ್ಲೆ ನಿಮಗೆ ನೂರು ದಿನಗಳ ಕೆಲಸ, ಗಂಡು-ಹೆಣ್ಣಿಗೆ ಸಮಾನ ಕೂಲಿ, ಪ್ರತಿ ದಿನಕ್ಕೆ 275 ರೂ.ಗಳನ್ನು ನೀಡಲಾಗುತ್ತದೆ ಎಂದರು. ಈ ವೇಳೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಪಿಡಿಒ ಹಾಗೂ ಇನ್ನಿತರರು ಇದ್ದರು.