ಬಳ್ಳಾರಿ: ಕಾಂಗ್ರೆಸ್ನ ಒಬ್ಬ ಮಂತ್ರಿಗೆ ಸನ್ಮಾನ ಮಾಡಲು ದಾದಾಗಿರಿ ಮಾಡಿಕೊಂಡು ಅಂದಾಜು 60 ಲಕ್ಷ ರೂ.ಗಳ ಹಣವನ್ನ ಸಾರ್ವಜನಿಕರಿಂದ ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು. ಅದನ್ನ ಮೊದಲು ವಿರೋಧಿಸಿದ್ದು ನಾನೇ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದ ತಾಳೂರು ರಸ್ತೆಯಲ್ಲಿರುವ ಗೋವಿಂದ ಕಲ್ಯಾಣ ಮಂಟಪದಲ್ಲಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಜಿಲ್ಲಾ ಪ್ರಮುಖರ ಚುನಾವಣಾ ಸಭೆಯಲ್ಲಿ ಅವರು ಈ ಆರೋಪ ಮಾಡಿದ್ದಾರೆ.
ಆ ದಿನ ಬಿಜೆಪಿಯಿಂದ ನಾವು 4 ಮಂದಿ ಶಾಸಕರಿದ್ದೆವು. ನಾನು ಶಿವಮೊಗ್ಗದಿಂದ ಆಯ್ಕೆಯಾಗಿದ್ದೆ. ಬಳ್ಳಾರಿಯಲ್ಲಿ ನಮ್ಮ ಪಕ್ಷ ಇದ್ದಿರಲಿಲ್ಲ. ಆಗ ನಾನು ಬಳ್ಳಾರಿಗೆ ಬಂದಿದ್ದೆ. ಮುನ್ಸಿಪಲ್ ಮೈದಾನದಲ್ಲಿ ಒಬ್ಬ ಕಾಂಗ್ರೆಸ್ ಮಂತ್ರಿಗೆ ಅದ್ಧೂರಿಯಾಗಿ ಸನ್ಮಾನ ಮಾಡೋ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಬೆಂಗಳೂರು ರಸ್ತೆಯಲ್ಲಿರುವ ಅಂಗಡಿಗಳಿಗೆ ತೆರಳಿ ಹಣ ವಸೂಲಾತಿಗೆ ನಿಂತಿದ್ದರು. ನಾನು ಮಂತ್ರಿಗಳಿಗೆ , ವಯಸ್ಸಾದವರಿಗೆ ಸನ್ಮಾನ ಮಾಡೋದು ಬೇಡ ಎನ್ನುವುದಿಲ್ಲ, ಆದರೆ, ನೀವು ಸಾರ್ವಜನಿಕರ ಬಳಿ ಹೋಗಿ ಈ ರೀತಿಯಾಗಿ ದೌರ್ಜನ್ಯ, ದಾದಾಗಿರಿ ಮಾಡಿ ಹಣ ವಸೂಲಾತಿ ಮಾಡೋದೋ ತಪ್ಪೆಂದು ನಾನು ಪ್ರಶ್ನಿಸಿದ್ದೆ ಎಂದರು.