ಹೊಸಪೇಟೆ: ರಾಜ್ಯ ಸರ್ಕಾರ ಜಿಂದಾಲ್‌ಗೆ 3667 ಎಕರೆ ಭೂಮಿ ಪರಭಾರೆ ಮಾಡಿಕೊಟ್ಟಿದೆ. ಒಂದು ವೇಳೆ ಭೂಮಿಯನ್ನು ಮರಳಿ ಪಡೆಯವ ಅಧಿಕಾರ ಇದ್ದಿದ್ದರೆ ನಾನು ಅದನ್ನು ಮರಳಿ ಪಡೆಯುತ್ತಿದ್ದೆ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭೂಮಿಯನ್ನು ಹಿಂಪಡೆಯುವ ಅಧಿಕಾರ ನನಗಿಲ್ಲ. ನಾನು ಈಗಲೂ ನನ್ನ ಮಾತಿಗೆ ಬದ್ಧನಿದ್ದೇನೆ. ಯಾವುದೇ ಸರ್ಕಾರವಾಗಲಿ ಭೂಮಿಯನ್ನು ಲೀಜ್ಗೆ ಕೊಡಬೇಕು. ಒಂದು ವೇಳೆ ಕಾರ್ಖಾನೆ ಬಂದ್ ಆದಲ್ಲಿ ಆ ಭೂಮಿಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ: ಜಿಂದಾಲ್‌ಗೆ ಭೂಮಿ ಪರಭಾರೆ: ಹೋರಾಟ ಮುಂದುವರೆಸಲು ಬಿಜೆಪಿ ನಿರ್ಧಾರ
ಭೂಮಿ ಪರಭಾರೆಯನ್ನು ಮೊನ್ನೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ನನಗೂ ಕೂಡ ಅಜೆಂಡಾ ಕಳುಹಿಸಿಕೊಡಲಾಗಿತ್ತು. ನಾನು ಕೊವೀಡ್ ವಿಚಾರದಲ್ಲಿದ್ದೆ. ಬೇರೆ ಬೇರೆ ತಾಲೂಕುಗಳ ಸಂಚಾರ ಮಾಡಿದ್ದೆ. ಹಾಗಾಗಿ ಅದನ್ನು ನೋಡೋಕೆ ಆಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಭೂಮಿಗಿಂತ ಹೆಚ್ಚಾಗಿ ಜನರ ಜೀವ ಮುಖ್ಯವಾಗಿತ್ತು. ಹಾಗಾಗಿ ನಾನು ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಿಲ್ಲ. ಸಚಿವ ಸಂಪುಟದ ಒಬ್ಬ ಸಚಿವ ನಾನು. ನಾನು ಸಭೆಗೆ ಖಂಡಿತ ವಿರೋಧ ಮಾಡುತ್ತಿದ್ದೆ ಎಂದರು.
"ಜಿಂದಾಲ್‌ಗೆ ಜಮೀನು ಪರಭಾರೆ ಮಾಡುವುದನ್ನು ಈ ಹಿಂದೆ ಬಲವಾಗಿ ವಿರೋಧಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಆನಂದ್ ಸಿಂಗ್ ಹಾಗೂ ಬಿಜೆಪಿಯವರು ಈಗ ಅದನ್ನು ಮಾರಾಟ ಮಾಡಿರುವುದಕ್ಕೆ ಅನುಮಾನ ಬರುತ್ತಿದೆ." ಎಂದು ಕೈ ನಾಯಕರು ಗಂಭೀರ ಆರೋಪ ಮಾಡಿದ್ದರು.
ಈ ಗಂಭೀರ ಆರೋಪದ ಕುರಿತು ಬುಧವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದರು.