ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆ ಬಳಿಯ ಒಂದು ಸಾವಿರ ಬೆಡ್ಗಳುಳ್ಳ ತಾತ್ಕಾಲಿಕ ಕೋವಿಡ್ ಆಸ್ಪತ್ರೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಭೇಟಿ ನೀಡಿದ್ರು.
ಈ ವೇಳೆ, ಸಾರ್ವಜನಿಕರೊಬ್ಬರು ಸ್ಥಳೀಯರಿಗೆ ಅವಕಾಶ ನೀಡುವಂತೆ ಕೋರಿದಾಗ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಗರಂ ಆದರು. ಇಲ್ಲಿ ಲೀಡರ್ ಆಗೋಕೆ ಬಂದಿದ್ದೀಯಾ ನೀನು. ನಿನ್ನೆಯ ದಿನ, ಮೊನ್ನೆಯ ದಿನ ನಾನು ಇಲ್ಲೇ ಇದ್ದೆ. ಅವಾಗ ಏನ್ ಮಾಡುತ್ತಿದ್ದಿ. ನಾನಿಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ನನಗೆ ಮೊದಲೇ ಹೇಳಬೇಕಿತ್ತು ಅದು ಬಿಟ್ಟು, ಇವರು ಬಂದಾಗ ನೀನು ಹೇಳೋಕೆ ಬಂದಿದ್ದೀಯಾ, ಲೀಡರ್ ಆಗ್ಬೇಕು ಅಂತಾನಾ ಎಂದು ಸಚಿವ ಆನಂದಸಿಂಗ್ ಅವರು ಏರು ಧ್ವನಿಯಲ್ಲೇ ಗದರಿದ್ರು.
ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕ ಈ ತುಕರಾಂ ಅವರು, ಆ ವ್ಯಕ್ತಿಯ ಪರವಾಗಿ ಮಾತನಾಡಿದಾಗಲೂ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಗರಂ ಆದರು. ನಾನು ಇಲ್ಲೇ ಇದ್ದೇನಲ್ಲಪ್ಪ. ನನಗೆ ಹೇಳೋದು ಬಿಟ್ಟು ಬಂದೋರ ಮುಂದೆ ಹೇಳೋದು ಯಾಕೆ? ಅವರಿಗೇನು? ಗೊತ್ತು? ಅಂತ ಜಿಂದಾಲ್ ಸಮೂಹ ಸಂಸ್ಥೆ ಪರವಾಗಿ ಮಾತನಾಡಿದ್ರು.
ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ ವಿಚಾರವಾಗಿ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದ ಸಚಿವ ಆನಂದಸಿಂಗ್, ಈಗ ಜಿಂದಾಲ್ ಸಮೂಹ ಸಂಸ್ಥೆ ಪರವಾಗಿಯೇ ಬ್ಯಾಟಿಂಗ್ ಬೀಸಿರೋದು ಸ್ಥಳದಲ್ಲಿದ್ದವರಿಗೆ ಅಚ್ಚರಿ ಮೂಡಿಸಿದೆ.