ಬಳ್ಳಾರಿ : ಹರಪನಹಳ್ಳಿಗೆ ಜಿಲ್ಲಾ ಕೇಂದ್ರ ನೀಡುವಂತೆ ಆಗ್ರಹಿಸಿ ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಮೌಲ್ವಿ ಖಾಜಾ ಮುಸ್ತಾಕ್ ಅಹ್ಮದ್ ರಜ್ವಿ ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಎರಡನೇ ದಿನವೂ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಮೌಲ್ವಿ ಮುಸ್ತಾಕ ಅಹ್ಮದ್ ಅವರು ಆಹಾರ, ನೀರು ಸೇವಿಸಲು ನಿರಾಕರಿಸಿದ್ದಾರೆ. ಮುನ್ನೆಚ್ಚರಿಕೆಯಿಂದ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
ಈ ಸಂಬಂಧ ಮೌಲ್ವಿ ಮುಸ್ತಾಕ ಅಹ್ಮದ್ ರಜ್ವಿ ಮಾತನಾಡಿ, ಹರಪನಹಳ್ಳಿಗೆ ಜಿಲ್ಲಾ ಕೇಂದ್ರ ನೀಡಲು ಭರವಸೆ ನೀಡುವವರೆಗೂ ತಾವು ಅಮರಣಾಂತ ಉಪವಾಸ ಮುಂದುವರಿಸುತ್ತೇನೆ. ವೈದ್ಯರ ಹಾಗೂ ಅಧಿಕಾರಿಗಳ ಸಲಹೆ ಮೇರೆಗೆ ಆಸ್ಪತ್ರೆಗೆ ತೆರಳುತ್ತಿದ್ದೇನೆ. ಆಸ್ಪತ್ರೆಯಲ್ಲೂ ಆಹಾರ,ನೀರು ಸೇವಿಸುವುದಿಲ್ಲ. ಜಿಲ್ಲಾ ರಚನೆಗೆ ಭರವಸೆ ದೊರೆತ ನಂತರವೇ ನನ್ನ ಸತ್ಯಾಗ್ರಹ ಕೊನೆಗೊಳ್ಳುವುದು ಎಂದರು.
ಬಳಿಕ ಅವರೊಂದಿಗಿದ್ದ ವಕೀಲ ಜಗದೀಶಪ್ಪ ಮಾತನಾಡಿ, ಬಳ್ಳಾರಿ ಜನತೆಯ ಆಶಯದಂತೆ ಹಂಪಿ ಹಾಗೂ ತುಂಗಭದ್ರಾ ಡ್ಯಾಂ ಇಲ್ಲದ ಜಿಲ್ಲೆಯಲ್ಲಿರುವುದಕ್ಕಿಂತ ವಿಜಯನಗರ ಜಿಲ್ಲೆಗೆ ಬಳ್ಳಾರಿಯನ್ನು ಸೇರಿಸಿಬಿಡಿ ಎನ್ನುವ ಕೂಗು ಕೇಳಿ ಬರುತ್ತಿದೆ.
ಅದರಂತೆ ಈಗಿರುವ ಬಳ್ಳಾರಿ ಜಿಲ್ಲಾ ಕೇಂದ್ರವನ್ನು ಪಶ್ಚಿಮ ತಾಲೂಕುಗಳಲ್ಲಿ ಒಂದಾದ ಹರಪನಹಳ್ಳಿ ತಾಲೂಕಿಗೆ ಸ್ಥಳಾಂತರಿಸಿದರೆ ಸೂಕ್ತ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತೆ ಎಂದರು. ಈ ಸಂದರ್ಭದಲ್ಲಿ ಹೊಸಹಳ್ಳಿ ಮಲ್ಲೇಶ, ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ಇದ್ಲಿ ರಾಮಪ್ಪ, ಗುಡಿಹಳ್ಳಿ ಹಾಲೇಶ, ದ್ವಾರಕೀಶ, ಪಿಎಸ್‌ಐ ಪ್ರಕಾಶ್ ಇತರರು ಇದ್ದರು.