ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಇಟಗಿಹಾಳ್ ಗ್ರಾಮದಲ್ಲಿ ಮದ್ಯಮಾರಾಟ ನಿಷೇಧಿಸುವಂತೆ ಆಗ್ರಹಿಸಿ ರಸ್ತೆ ತಡೆದ ಮಹಿಳೆಯರು ಕೆಲಕಾಲ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಗಡಿ ಗ್ರಾಮವಾದ ಇಟಗಿಹಾಳ್ ಗ್ರಾಮದಲ್ಲಿ ವಿಪರೀತ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಇದನ್ನು ನಿಲ್ಲಿಸುವಂತೆ ಒತ್ತಾಯಿಸಿ ಗ್ರಾಮದ ನೂರಾರು ಮಹಿಳೆಯರು ನೆರೆಯ ಆಂಧ್ರ ಪ್ರದೇಶದ ಆದೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೇ ಅಡುಗೆ ತಯಾರಿಸಿಕೊಂಡು ಬೃಹತ್ ಪ್ರತಿಭಟನೆ ನಡೆಸಿದರು.
ಕೆಲಕಾಲ ರಸ್ತೆ ಸಂಚಾರಕ್ಕೂ ಅಡ್ಡಿಪಡಿಸಿದ ಗ್ರಾಮಸ್ಥರು, ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುವ ನಮ್ಮ ಗಂಡಂದಿರು ಮದ್ಯ ಸೇವನೆ ಮಾಡಿ ತಮ್ಮ ಆರೋಗ್ಯ ಹದಗೆಡಿಸಿಕೊಳ್ಳುವುದಲ್ಲದೆ, ಮನೆಯ ನೆಮ್ಮದಿಯನ್ನೂ ಹಾಳು ಮಾಡುತ್ತಿದ್ದಾರೆ. ಕೂಡಲೇ ಈ ಮದ್ಯ ಮಾರಾಟವನ್ನ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಿರುಗುಪ್ಪ ಪಟ್ಟಣದ ನಡು ರಸ್ತೆಯಲ್ಲೇ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಮೊಕ್ಕಾಂ ಹೂಡಿದ್ದರ ಪರಿಣಾಮ ಪೊಲೀಸರು ಮತ್ತು ಗ್ರಾಮಸ್ಥರ ಮಧ್ಯೆ ಮಾತಿಮ ಚಕಮಕಿ ನಡೆಯಿತು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರಿಗೂ ನಾವು ಈ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪ್ರಸಂಗವೂ ನಡೆಯಿತು.
ಸದ್ಯ ಇಟಗಿಹಾಳ್ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಮ್ಮೂರಿನಲ್ಲಿರುವ ಮದ್ಯದ ಅಂಗಡಿಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲೇಬೇಕೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.