ಬಳ್ಳಾರಿ : ನನಗೆ ಯಾವ ಹಮ್ಮು ಇಲ್ಲ, ಬಿಮ್ಮೂ ಇಲ್ಲ. ಇವತ್ತಿಗೂ ಇರುವುದಕ್ಕೆ ನನಗೆ ಮನೆ ಇಲ್ಲ. ಈ ಅಧಿಕಾರ ಹಾಗೂ ಪ್ರಶಸ್ತಿ ಬಂದಿರೋದು ನೀವೆಲ್ಲ ಹಾಕಿದ ಭಿಕ್ಷೆಯಿಂದ ಎಂದು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಭಾವುಕರಾದರು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಪತ್ರಕರ್ತರು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಸಾಂಸ್ಕೃತಿಕ ಅಕಾಡೆಮಿ ಮಾಡಿ ಅಂತಾ ನಾನು ಹೇಳಿದ್ದೇನೆಂದು ಭಾವಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿತ್ತು.
ನನ್ನ ಬಗ್ಗೆ ಹಗುರವಾದ ಕಮೆಂಟ್ ಮಾಡಿರೋದನ್ನು ನೋಡಿ ನನ್ನ ಮನಸ್ಸಿಗೆ ಘಾಸಿಯಾಯಿತು. ನನ್ನನ್ನ ಪತ್ರಕರ್ತರು ಮುಕ್ತ ಮನಸ್ಸಿನಿಂದ ಬೆಳೆಸಿದ್ದಾರೆ. ನನಗೆ ಯಾವ ಹಮ್ಮು,ಬಿಮ್ಮೂ ಇಲ್ಲ. ಅಧಿಕಾರದ ದರ್ಪ ಕೂಡ ಇಲ್ಲ ಎಂದರು.
ಬಳಿಕ ಕನ್ನಡಪ್ರಭ ಹಿರಿಯ ವರದಿಗಾರ ಕೆ.ಎಂ.ಮಂಜುನಾಥ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದ ವರದಿಗಾರರು ಸೋಮಾರಿಗಳಾಗುತ್ತಿದ್ದಾರೆ. ಮಾಧ್ಯಮದ ಆಶಯಗಳಿಗೆ ತಕ್ಕಂತೆ ವರದಿಗಾರಿಕೆಯು ಇತರೆ ಜಿಲ್ಲೆಗಳಿಗಿಂತ ಇಲ್ಲಿ ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದ ಜಡೇಶ್,ವರದಿಗಾರ ನರಸಿಂಹಮೂರ್ತಿ, ಕನ್ನಡಪ್ರಭದ ಛಾಯಾಚಿತ್ರಕಾರ ಹಂದ್ಯಾಳ ಪುರುಷೋತ್ತಮ್ ಸೇರಿ ಇತರರು ಉಪಸ್ಥಿತರಿದ್ದರು.