ಬಳ್ಳಾರಿ: ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ.ನಿಂಬರಗಿ ತಿಳಿಸಿದ್ದಾರೆ.
ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿಂದು ಅಧಿಕಾರ ಸ್ವೀಕರಿಸಿದ ಬಳಿಕ ಈಟಿವಿ ಭಾರತದೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ರಾಜಕೀಯ ಚರಿತ್ರೆ ಕುರಿತು ಅಲ್ಪಸ್ವಲ್ಪ ತಿಳಿದಿರುವೆ. ಹಿಂದಿನ ಘಟನೆಗಳನ್ನ ಮೆಲುಕು ಹಾಕೋದಕ್ಕಿಂತ ಮುಂದೇನು ಮಾಡಬೇಕೆಂಬ ಗಂಭೀರ ಚಿಂತನೆ ನಡೆದಿದೆ. ಅದೆಲ್ಲ ಈಗ ಮುಗಿದ ಅಧ್ಯಾಯ. ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಗಡಿಯಂಚಿನ ಜಿಲ್ಲೆ ಇದಾಗಿರೋಗಿದರಿಂದ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಚುನಾವಣೆ ನಿಮಿತ್ತ ಎಲ್ಲ ಲಘು ಮತ್ತು ಭಾರಿ ವಾಹನಗಳ ತಪಾಸಣೆಯು ಯಥಾರೀತಿಯಾಗಿ ಇರಲಿದೆ. ಕೂಡಲೇ ಅಧಿಕಾರಿಗಳ ಸಭೆ ಕರೆದು ಎಲ್ಲ ಮಾಹಿತಿಯನ್ನು ಪಡೆದುಕೊಳ್ಳುವೆ ಎಂದು ಎಸ್ಪಿ ನಿಂಬರಗಿ ತಿಳಿಸಿದರು.
ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೆಣಕನಹಳ್ಳಿ ಗ್ರಾಮದವರಾದ ಲಕ್ಷ್ಮಣ ಅವರು, ಸರ್ಕಾರಿ ನೌಕರನ ಮಗನಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯ ಕೆಅರ್ ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರರಾದ ಲಕ್ಷ್ಮಣ ಅವರು, ಕಾಲೇಜುವೊಂದರಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
ಆ ಬಳಿಕ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಪ್ರೊಬೇಷನರಿ ಡಿವೈಎಸ್ಪಿಯಾಗಿ, ಚಿತ್ರದುರ್ಗ ಜಿಲ್ಲೆಯ ಎಎಸ್ಪಿಯಾಗಿ, ಉಡುಪಿ ಜಿಲ್ಲೆಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಬೆಂಗಳೂರಿನ ವೈರ್ಲೆಸ್ ವಿಭಾಗದ ಎಸ್ಪಿಯಾಗಿದ್ದ ಅವರನ್ನ ಬಳ್ಳಾರಿ ಜಿಲ್ಲೆಯ ಎಸ್ಪಿಯನ್ನಾಗಿ ರಾಜ್ಯ ಸರ್ಕಾರ ವರ್ಗಾವಣೆ ಅದೇಶ ಹೊರಡಿಸಿದೆ.
ಈ ಹಿಂದೆ ಶಿವಮೊಗ್ಗ ಲಕ್ಷ್ಮಣ ನಿಂಬರಗಿ ಅವರು ಲೋಕಸಭಾ ಉಪಚುನಾವಣೆ, ಉಡುಪಿ ಜಿಲ್ಲೆಯ 2018ರ ವಿಧಾನಸಭಾ ಚುನಾವಣಾ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.