ಬಳ್ಳಾರಿ: ಕೊರೊನಾ ಹಿನ್ನೆಲೆ ಇಡೀ ದೇಶವೇ ಲಾಕ್ಡೌನ್ ಆದ ಕಾರಣ ಗಣಿನಾಡು ಬಳ್ಳಾರಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಆಗಮಿಸಿರುವ ನೂರಾರು ವಲಸಿಗ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಸತತ ಹದಿನೈದು ದಿನಗಳ ಕಾಲ ಬಳ್ಳಾರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ಟ್ರಾನ್ಸ್ಪೋರ್ಟ್ ಕಚೇರಿಗಳಲ್ಲೇ ಉಳಿದುಕೊಂಡು ದಿನ ಕಳೆಯುತ್ತಿದ್ದಾರೆ. ನೆರೆಹೊರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್, ಬಿಹಾರ, ಪಂಜಾಬ್ ಹಾಗೂ ಮಹಾರಾಷ್ಟ್ರ ಮೂಲಗಳಿಂದ ಲಾರಿ ಚಾಲಕರು, ಕ್ಲೀನರ್‌ಗಳು ಲಾಕ್ಡೌನ್ಗೂ ಮುನ್ನವೇ ಗಣಿಜಿಲ್ಲೆಗೆ ಕಾಲಿರಿಸಿದ್ದಾರೆ. ಆದರೆ, ಲಾಕ್ಡೌನ್ ಆದೇಶ ಹೊರಡಿಸುತ್ತಿದ್ದಂತೆಯೇ ಅವರ ಜೀವನ ಸ್ಥಿತಿ ಚಿಂತಾಜನಕವಾಗಿದೆ.
ಇನ್ನು ಈ ಕಾರ್ಮಿಕರು ಲಾರಿಗಳಲ್ಲೇ ಅಡಿಗೆ ಮಾಡಿಕೊಂಡು, ಅಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಗುಜರಾತ್ ಮೂಲದ ಚಾಲಕ ಭೇದಿ ಪಂಡಿತ್ ಈ ಬಗ್ಗೆ ಮಾತನಾಡಿ, ಕಳೆದ ಹದಿನೈದು ದಿನಗಳಿಂದ ಇಲ್ಲೇ ವಾಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಯಾವುದೇ ದಿನಸಿಗಳನ್ನ ನಮಗೆ ಪೂರೈಕೆ ಮಾಡಿಲ್ಲ. ನಾವು ಹಣ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಇನ್ಮುಂದೆ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.