ಬಳ್ಳಾರಿ: ನಗರದ ಹೊರವಲಯದ 5ನೇ ವಾರ್ಡ್ನ ಮುಂಡರಗಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಪ್ರತ್ಯೇಕ ಕಟ್ಟಡವಿಲ್ಲ. ಹೀಗಾಗಿ ಕಳೆದ ಹಲವಾರು ವರ್ಷಗಳಿಂದ ಶಾಲೆಯ ಕೊಠಡಿಯನ್ನೇ ಅವಲಂಬಿಸುವಂತಾಗಿದೆ.
ಅಲ್ಲದೆ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್ ಕಾಂಕ್ರೀಟ್ ಸಹ ಬಿದ್ದಿದೆ. ಇದರಿಂದಾಗಿ ಗ್ರಂಥಾಲಯಕ್ಕೆ ಬಂದು ಓದುವ ಯುವಕರಿಗೆ, ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂದು ಗ್ರಾಮಸ್ಥರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಗ್ರಾಮದ ಯುವಕ ಎರಿಸ್ವಾಮಿ ಮಾತನಾಡಿ, ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯದ ಕಟ್ಟಡದ ಸ್ಥಿತಿ ಶೋಚನಿಯವಾಗಿದೆ. ಹಲವಾರು ವರ್ಷಗಳಿಂದ ಶಾಲೆಯ ಕೊಠಡಿಯಲ್ಲಿಯೇ ಇದಕ್ಕೆ ಜಾಗ ಕಲ್ಪಿಸಲಾಗಿದೆ. ಇಲ್ಲಿನ ಮೇಲ್ಛಾವಣಿ ಸಿಮೆಂಟ್ ಸಹ ಉದುರಿ ಬೀಳುತ್ತಿದೆ. ಇದು ಓದುವ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಆತಂಕ ಸೃಷ್ಟಿಸಿದೆ. ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಪತ್ರ ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯ ಮಾಡಿದರು.
ಓದಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ; ಸುರೇಶ್ ಕುಮಾರ್
ನಂತರ ಮಾತನಾಡಿದ ಗ್ರಾಮದ ಯುವಕ ಉಮೇಶ್, ಸಾರ್ವಜನಿಕ ಗ್ರಂಥಾಲಯವನ್ನು ಕಳೆದ ಹಲವಾರು ವರ್ಷಗಳಿಂದ ಶಾಲೆಯ ಕೊಠಡಿಯಲ್ಲಿ ನಡೆಸುತ್ತಿದ್ದಾರೆ. ಆದ್ರೆ ಇಲ್ಲಿಯ ಕಟ್ಟಡದ ಪರಿಸ್ಥಿತಿ ಸರಿಯಿಲ್ಲ. ಈ ಸಾರ್ವಜನಿಕ ಗ್ರಂಥಾಲಯಕ್ಕೆ ಅನೇಕ ಯುವಕರು, ವಿದ್ಯಾರ್ಥಿಗಳು, ನೂರಾರು ಸಾರ್ವಜನಿಕರು ಬರುತ್ತಾರೆ. ಅವರಿಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಸಹ ಒದಗಿಸಬೇಕು ಎಂದು ಒತ್ತಾಯ ಮಾಡಿದರು.
ಮೇಲ್ವಿಚಾರಕರಿಗೆ ಸರಿಯಾಗಿ ಸಂಬಳವಿಲ್ಲ: ಗ್ರಂಥಾಲಯದ ಮೇಲ್ವಿಚಾರಕ ರುದ್ರಪ್ಪ ಅವರು ವಿಕಲಚೇತನರಾಗಿದ್ದಾರೆ. 2009ನೇ ಸಾಲಿನಿಂದ ಕೆಲಸ ಮಾಡುತ್ತಿರುವ ಇವರಿಗೂ ಸಹ ಯಾವುದೇ ಆರ್ಥಿಕ ಸಹಾಯ ಸಿಗುತ್ತಿಲ್ಲ ಎಂದು ದೂರಿದರು.