ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಕಂಪ್ಲಿ ತಾಲೂಕನ್ನು ಸೇರಿಸಬೇಕೆಂದು ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಆಗ್ರಹಿಸಿದ್ದಾರೆ.
ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯನ್ನ ಬೆಂಬಲಿಸಿ ಈ ಹಿಂದೆ ಶಾಸಕ ಆನಂದಸಿಂಗ್ ಅವರ ನೇತೃತ್ವದ ನಿಯೋಗದೊಂದಿಗೆ ನಾನೂ ಕೂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಎಂದರು.
ನಂತರ ಮಾತು ಮುಂದುವರೆಸಿದ ಅವರು, ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿ ರಚನೆ ಮಾಡುವುದೇ ಆದ್ರೆ, ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿರುವೆ. ಅದರೊಂದಿಗೆ ಯಾವ ಯಾವ ತಾಲೂಕಗಳನ್ನೂ ಕೂಡ ಸೇರಿಸಬೇಕೆಂಬ ಪಟ್ಟಿಯನ್ನೂ ಮಾಡಲಾಗಿತ್ತು. ಆದ್ರೆ, ಜಿಲ್ಲಾಡಳಿತ ತಯಾರಿಸಿದ ಪಟ್ಟಿಯಿಂದ ಕಂಪ್ಲಿ ತಾಲೂಕು ಕೈಬಿಡಲಾಗಿದೆ. ಅದಕ್ಕೆ ನಾನು ಸುತಾರಾಂ ಒಪ್ಪುವುದಿಲ್ಲ ಎಂದಿದ್ದಾರೆ.
ಕೂಸು ಹುಟ್ಟೋಕೆ ಮುಂಚೆಯೇ ಕುಲಾಯಿ ತೊಡಿಸಿದ್ರು ಎಂಬಂತೆ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯೇ ಆಗಿಲ್ಲ. ಆದರೂ ಜಿಲ್ಲೆಯ ತಾಲೂಕುಗಳ ಸೇರಿಸಲು ತೀವ್ರ ತರನಾದ ಪೈಪೋಟಿ ಶುರುವಾಗಿದೆ. ಜಿಲ್ಲೆಯ ಕಂಪ್ಲಿ - ಕೂಡ್ಲಿಗಿ ತಾಲೂಕುಗಳನ್ನ ನೂತನ ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಆಗ್ರಹಿಸಿದ್ದಾರೆ. ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಕಂಪ್ಲಿ ತಾಲೂಕು ಸೇರಿಸುವಂತೆ ಆಗ್ರಹಿಸಿ ಶಾಸಕ ಗಣೇಶ ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಮತ್ತೊಮ್ಮೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಳಿ ನಿಯೋಗ ಕೊಂಡೊಯ್ಯಲು ಶಾಸಕ ಗಣೇಶ್ ಸಜ್ಜಾಗಿದ್ದು, ಅದರ ಜೊತೆಗೆ ಹೋರಾಟಕ್ಕೂ ರೆಡಿ ಎಂದಿದ್ದಾರೆ. ವಿಜಯನಗರ ಜಿಲ್ಲೆ ರಚನೆ ಮಾಡುವಂತೆ ಆಗ್ರಹಿಸಲು ನಾನೂ ಕೂಡಾ ಆನಂದಣ್ಣನ ಜೊತೆ ಸಿಎಂ ಭೇಟಿ ಮಾಡಿದ್ದೆ. ಈಗ ನಮ್ಮ ತಾಲೂಕು ಬಿಟ್ರೆ ಹೇಗೆ ಅಂತಾ ಅವರು ಪ್ರಶ್ನಿಸಿದ್ದಾರೆ.