ಬಳ್ಳಾರಿ: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ವೈದ್ಯ ಕುಟುಂಬವು ಕಂಬನಿ ಮಿಡಿದಿದೆ.
ಬಳ್ಳಾರಿಯ ಗಾಂಧಿನಗರದ ನಿವಾಸಿಯಾಗಿದ್ದ ಡಾ. ಬಿ.ಕೆ. ಶ್ರೀನಿವಾಸ ಮೂರ್ತಿ, ಧರ್ಮಪತ್ನಿ ಶಾಂತ ಮೂರ್ತಿ, ಪುತ್ರರಾದ ಡಾ. ಬಿ.ಕೆ. ಸುಂದರ್, ಡಾ. ಬಿ.ಕೆ. ಶ್ರೀಕಾಂತ, ಪುತ್ರಿಯರಾದ ಕಮಲ, ರಮಾ ವಿದ್ಯಾಭೂಷಣ ಹಾಗೂ ಸೊಸೆಯಂದಿರಾದ ಡಾ.ಜೋಷ್ನಾ, ಡಾ.ಅನುಪಮಾ ಅವರು ಸುಷ್ಮಾ ಸ್ವರಾಜ್ ಅಗಲಿಕೆಯಿಂದ ಈ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಆ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಪ್ರತಿವರ್ಷ ವರಮಹಾಲಕ್ಷ್ಮಿ ಪೂಜೆಯ ದಿನದಂದು ಬಳ್ಳಾರಿಗೆ ಆಗಮಿಸುತ್ತಿದ್ದರು. ನಮ್ಮ ಮನೆಯೊಳಗೆ ನಡೆಯುವ ವರ ಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸುತ್ತಿದ್ದರು. ಪ್ರತಿಯೊಂದು ಪೂಜಾ ವಿಧಿವಿಧಾನಗಳನ್ನು ನಮ್ಮಅತ್ತೆಯ ಬಳಿ ತಿಳಿದುಕೊಂಡು ಮುಂದೆಜ್ಜೆ ಹಿಡಿಯುತ್ತಿದ್ದರು. ಬೆಳಗಿನ ಉಪಾಹಾರಕ್ಕೆಂದು ನಮ್ಮ ಮನೇಲಿ ಇಡ್ಲಿ, ದೋಸೆ ಇತ್ಯಾದಿ ತಿಂಡಿ, ತಿನಿಸುಗಳನ್ನು ತಯಾರಿಸಿ, ಉಣಬಡಿಸಲು ಮುಂದಾದಾಗ, ಎಲ್ಲಿ ನನ್ನ ಇಷ್ಟದ ಪಡ್ಡು ಎನ್ನುತ್ತಿದ್ದರು. ಅದನ್ನೇ ಮಾಡಿಸಿಕೊಂಡು ತಿನ್ನುತ್ತಿದ್ದರು. ಅವರು ಬಳ್ಳಾರಿಯಿಂದಲೇ ಪಡ್ಡಿನ ಹೆಂಚನ್ನು ಖರೀದಿಸಿ ತಮ್ಮೂರಿಗೆ ತೆಗೆದುಕೊಂಡು ಹೋಗಿದ್ದರು ಎಂದು ಡಾ. ಬಿ.ಕೆ. ಶ್ರೀಕಾಂತ ಅವರ ಪತ್ನಿ ಡಾ. ಜೋಷ್ನಾ ನೆನಪಿಸಿಕೊಂಡರು.
ಸತತ 12 ವರ್ಷಗಳ ಕಾಲ ಪ್ರತಿವರ್ಷದ ವರಮಹಾಲಕ್ಷ್ಮಿ ಹಬ್ಬಕ್ಕೆಂದೇ ನಮ್ಮ ಮನೆಗೆ ಬರ್ತಿದ್ರು. ಅವರು ನಮ್ಮ ಮನೆಯ ಕುಟುಂಬದ ಸದಸ್ಯರಾಗಿದ್ರು. ಈಗ ಅವರ ಅಗಲಿಕೆಯಿಂದ ನಮಗೆ ಅತೀವ ದುಃಖವಾಗಿದೆ ಎಂದು ಕಂಬನಿ ಮಿಡಿದರು.
ಸುಷ್ಮಾ ಅವರು ನಮ್ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಆದರೆ, ಬದಲಾದ ರಾಜಕೀಯ ಸ್ಥಿತಿಯಲ್ಲಿ ಅವರು ಬಳ್ಳಾರಿಗೆ ಬರೋದನ್ನೇ ನಿಲ್ಲಿಸಿದ್ರು. ಆದರೂ, ನಾವು ಅವರನ್ನು ನೆನೆಯುತ್ತ ಹಬ್ಬ ಮಾಡ್ತಿದ್ವಿ. ಕಳೆದ ಮೂರು ದಿನಗಳ ಹಿಂದೆ ಕರೆ ಮಾಡಿದ್ವಿ. ನನಗೆ ಆರೋಗ್ಯ ಸರಿಯಿಲ್ಲ, ಈ ಬಾರಿ ಬರೋದು ಡೌಟು ಅಂದಿದ್ದರು. ಇದೀಗ ಅವರ ಅಗಲಿಕೆಯಿಂದ ಮನೆ ಸದಸ್ಯೆಯನ್ನು ಕಳೆದುಕೊಂಡ ದುಃಖ ನಮಗಿದೆ ಎಂದು ಡಾ. ಬಿ.ಕೆ. ಶ್ರೀನಿವಾಸ್ ಅವರ ಧರ್ಮಪತ್ನಿ ಶಾಂತ ಮೂರ್ತಿ ತಿಳಿಸಿದ್ದಾರೆ.