ಬಳ್ಳಾರಿ: ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದ ಕಾರಣ ಬಳ್ಳಾರಿ ಜಿಲ್ಲೆಯ ದರೋಜಿ ಕೆರೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ.
ದರೋಜಿ ಕೆರೆಯ ಹಿನ್ನೀರಿನ ಪ್ರದೇಶವು ಸಂಪೂರ್ಣ ಬರಡಾಗಿದೆ. ಈ ಕೆರೆಯ ಹಿನ್ನೀರಿನ ಪ್ರದೇಶಕ್ಕೆ ಈಗ ಜಾನುವಾರುಗಳು ಹುಲ್ಲು ಮೇಯಲು ಬರ್ತಿವೆ. ದರೋಜಿ ಕೆರೆಯ ಅರ್ಧಭಾಗ ಕೂಡ ಈ ಬಾರಿ ಭರ್ತಿಯಾಗಿಲ್ಲ. ಕಳೆದ ವರ್ಷ ಇಷ್ಟೊತ್ತಿಗಾಗಲೇ ಕೆರೆ ಭರ್ತಿಯಾಗಿತ್ತು. ದರೋಜಿ ಕೆರೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಹತ್ತು ಗ್ರಾಮಗಳು ಬರಲಿದ್ದು, ಆಯಾ ಗ್ರಾಮಗಳಲ್ಲಿನ ಸಾವಿರಾರು ಎಕರೆಗೆ ಪ್ರದೇಶಕ್ಕೆ ಈ ನೀರು ಬಳಕೆಯಾಗುತ್ತಿದೆಯಾದ್ರೂ ಈ ಬಾರಿ ಮಳೆಯ ಪ್ರಮಾಣ ತಗ್ಗಿದ ಪರಿಣಾಮ ಈವರೆಗೂ ಭತ್ತದ ಬೆಳೆಯ ನಾಟಿ ಕಾರ್ಯವೂ ನಡೆದೇ ಇಲ್ಲ.
ಕೆರೆಯೊಳಗೆ ಇಳಿಯಲು ನಿರ್ಮಿಸಿರುವ ಮೆಟ್ಟಿಲುಗಳು ದುರಸ್ತಿಗೆ ಬಂದಿವೆ. ಕೆರೆಗೆ ತ್ಯಾಜ್ಯ ರಾಶಿಯನ್ನೇ ಬಿಸಾಡಲಾಗುತ್ತದೆ. ಅಲ್ಲದೇ, ರಾತ್ರಿವೇಳೆ ಕೆರೆಯಂಚಿನಲ್ಲಿ ಮದ್ಯ ವ್ಯಸನಿಗಳ ಹಾವಳಿ ಜಾಸ್ತಿಯಾಗಿದೆ. ಕೆರೆಯಲ್ಲಿ ಮದ್ಯದ ಬಾಟಲ್‌ಗಳನ್ನು ಎಸೆಯಲಾಗಿದೆ. ಕೆರೆಯ ವಡ್ಡಿನಲ್ಲಿ ಬಳ್ಳಾರಿ ಜಾಲಿ ಮನುಷ್ಯರೇ ಕಾಣದ ಎತ್ತರಕ್ಕೆ ಬೆಳೆದು ನಿಂತಿದೆ. ಕೆರೆಯ ವಡ್ಡು ಪ್ರದೇಶದ ಅಂಚಿನಲ್ಲಿ ಸಮಯಾನುಸಾರ ಜಂಗಲ್ ಕಟ್ಟಿಂಗ್ ನಡೆಯುತ್ತಿಲ್ಲ. ತುಂಗಭದ್ರಾ ಜಲಾಶಯದ ಒಳಹರಿವು ಬರುವ ಸಂದರ್ಭ ಮಾತ್ರ ಬಳ್ಳಾರಿ ಜಾಲಿ ಕಟ್ಟಿಂಗ್ ನಡೆಸಲಾಗಿದೆ ಎಂಬ ಆರೋಪ ಕೂಡ ಇದೆ.