ಬಳ್ಳಾರಿ: ಜೀನ್ಸ್ ಉತ್ಪನ್ನಗಳ ಘಟಕಗಳಲ್ಲಿ ಕಾರ್ಮಿಕರ ಕೊರತೆ ಎದುರಾಗಿದ್ದು, ಟೇಲರಿಂಗ್ ಸೇರಿದಂತೆ ನಾನಾ ಕೆಲಸದಲ್ಲಿ ನೈಪುಣ್ಯತೆ ಹೊಂದಿರುವ ಕಾರ್ಮಿಕರು ಸ್ವಾವಲಂಬಿಗಳಾಗಿದ್ದಾರೆ.
ಕೊರೊನಾ ಪ್ರೇರಿತ ಲಾಕ್ಡೌನ್ನಿಂದ ಜೀನ್ಸ್ ಉತ್ಪನ್ನ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರು ಅಕ್ಷರಶಃ ನಿರುದ್ಯೋಗಿಗಳಾಗಿದ್ದರು. ಇನ್ನೇನು ಬೀದಿಗೆ ಬೀಳುವ ಹಂತಕ್ಕೆ ತಲುಪಿದ್ದ ಅವರನ್ನ ಸ್ವಯಂ ಉದ್ಯೋಗ ಕೈ ಹಿಡಿದಿದೆ.
ಗೂಡಂಗಡಿ, ಚಹಾ ಅಂಗಡಿ, ಹೋಟೆಲ್ ಮತ್ತು ಆಟೋ ರಿಕ್ಷಾಗಳ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಹೀಗಾಗಿ ಈ ಜೀನ್ಸ್ ತಯಾರಿಕಾ ಘಟಕದಲ್ಲಿ ಕಾರ್ಮಿಕರಿಲ್ಲದೆ ಮಾಲೀಕರು ಹೈರಾಣಾಗಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 500 ಜೀನ್ಸ್ ಘಟಕಗಳಿದ್ದು, ಲಕ್ಷಕ್ಕೂ ಅಧಿಕ ಜೀನ್ಸ್ ಪ್ಯಾಂಟ್ಗಳನ್ನು ತಯಾರಿಸಲಾಗುತ್ತಿತ್ತು. ಅದು ಈಗ 50,000 ಸಾವಿರಕ್ಕೆ ಬಂದು ನಿಂತಿದ್ದು, ಜೀನ್ಸ್ ಘಟಕಗಳ ಮೇಲೆ 10,000 ಕುಟುಂಬಗಳು ಅವಲಂಬಿತವಾಗಿದ್ದವು. ಇದೀಗ ಸುಮಾರು 3,000ಕ್ಕೂ ಅಧಿಕ ಕುಟುಂಬಗಳು ವಿಮುಖವಾಗಿವೆ.
ಈ ಹಿಂದೆ ಸಾಕಷ್ಟು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದರಲ್ಲಿ ಬಹುತೇಕರು ನೆರೆಯ ಆಂಧ್ರ ಪ್ರದೇಶದ ಗಡಿ ಗ್ರಾಮಗಳಿಂದ ಆಗಮಿಸುತ್ತಿದ್ದರು. ಈಗ ಕಾರ್ಮಿಕರ ಬರುವಿಕೆಯನ್ನು ಎದುರು ನೋಡುವಂತಾಗಿದೆ.
ವಿದೇಶ ಹಾಗೂ ಸ್ವದೇಶದಲ್ಲಿ ಜೀನ್ಸ್ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆಯಾದ್ರೂ ಜೀನ್ಸ್ ಉತ್ಪನ್ನಗಳನ್ನ ಸಕಾಲದಲ್ಲಿ ತಯಾರಿಸಿ ಪೂರೈಕೆ ಮಾಡಲಾರದಂತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಮಾಲೀಕರು.