ಬಳ್ಳಾರಿ: ಗಣಿನಾಡಿನ ಮಟ್ಟಿಗೆ ಜಿಂದಾಲ್ ಸಮೂಹ ಸಂಸ್ಥೆಯೇ ಸರ್ಕಾರ ಆಗಿಬಿಟ್ಟಿದೆ. ಇಲ್ಲಿ ಅವರದ್ದೇ ಆಡಳಿತ ಎಂದು ಕಾಂಗ್ರೆಸ್ ಮುಖಂಡ ಕುಡಿತಿನಿ ಶ್ರೀನಿವಾಸ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ 29 ಜಿಲ್ಲೆಗಳಿಗೆ ಬಿಎಸ್ವೈ ಸಿಎಂ ಆದ್ರೆ, ಗಣಿಜಿಲ್ಲೆಯ ಮಟ್ಟಿಗೆ ಮಾತ್ರ ಜಿಂದಾಲ್ ಸಮೂಹ ಸಂಸ್ಥೆಯ ಮಾಲೀಕ ಸಜ್ಜನ್ ಜಿಂದಾಲ್ ಸಿಎಂ. ವಿನೋದ ನೋವೆಲ್ ಗೃಹಮಂತ್ರಿ, ಆರೋಗ್ಯ ಮಂತ್ರಿ ರಾಜಶೇಖರ ಪಟ್ಟಣಶೆಟ್ಟಿ, ಮಂಜುನಾಥ ಪ್ರಭು ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇವರೇ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿನಿಮಾ ಹೀರೋ ಆಗಿದ್ದಾರೆ ಸಚಿವ ಆನಂದ ಸಿಂಗ್:
ಜಿಂದಾಲ್ ವಿಚಾರವಾಗಿ ಮೃದುಧೋರಣೆ ತೋರಲ್ಲ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಜಿಂದಾಲ್ನ್ನು ಸೀಲ್ಡೌನ್ ಮಾಡುವ ನಿರ್ಧಾರ ಯಾಕೆ ತೆಗೆದುಕೊಳ್ಳುತ್ತಿಲ್ಲ. ಬೆಳಗ್ಗೆ ಒಂದು ರೀತಿ ಹೇಳಿಕೆ ನೀಡಿದ್ರೆ, ಮಧ್ಯಾಹ್ನ ಒಂದು ಹೇಳಿಕೆ ನೀಡುತ್ತಿದ್ದಾರೆ ಎಂದರು. ಜೊತೆಗೆ ಜಿಲ್ಲಾಧಿಕಾರಿಯವರೇ ಅದನ್ನೆಲ್ಲಾ ನೋಡಿಕೊಳ್ತಾರೆ ಎಂದು ಹೇಳುವ ಮುಲಕ ಸಚಿವರು ಸಿನಿಮಾ ಹೀರೋ ಆಗಿದ್ದಾರೆ ಎಂದರು.
ಜಿಂದಾಲ್ ವಿಚಾರವಾಗಿ ದೃಢ ನಿರ್ಧಾರ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಜಿಂದಾಲ್ ವಿಚಾರದಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಕೂಡಲೇ ಜಿಂದಾಲ್ ಸೀಲ್ಡೌನ್ ಆಗದೇ ಹೋದ್ರೆ ಜಿಂದಾಲ್ ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಶ್ರೀನಿವಾಸ್ ಎಚ್ಚರಿಸಿದ್ದಾರೆ.