ಬಳ್ಳಾರಿ : ಗಣಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಟಿ ಹೆಚ್ ಸುರೇಶಬಾಬು ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆಯು ಬೆಂಗಾವಲು ಪಡೆಯ ಪೊಲೀಸ್ ಸಿಬ್ಬಂದಿಯುಳ್ಳ ವಾಹನ ನೀಡಿರೋದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಜೆ ಎನ್ ಗಣೇಶ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕ ಸುರೇಶಬಾಬು ಅವರಿಗೆ ಪೊಲೀಸ್ ಭದ್ರತಾ ಬೆಂಗಾವಲು ಪಡೆಯ ವಾಹನವುಳ್ಳ ಸಿಬ್ಬಂದಿಯನ್ನ ನೀಡಿರೋದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆಯನ್ನ ಎತ್ತಿದ್ದಾರೆ.
ಇದರ ಬೆನ್ನಲ್ಲೇ ಮಾಜಿ ಶಾಸಕ ಸುರೇಶಬಾಬು ಅವರಿಗೆ ಪೊಲೀಸ್ ಭದ್ರತಾ ಪಡೆಯ ವಾಹನದ ಸೌಲಭ್ಯ ನೀಡಿರೋದು ಗಣಿ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟಿ ಹೆಚ್ ಸುರೇಶಬಾಬು ಒಬ್ಬ ಮಾಜಿ ಶಾಸಕರು. ಅವರಿಗೇಕೆ ಇಷ್ಟೊಂದು ಆತಿಥ್ಯ. ಹಾಲಿ ಶಾಸಕರೇ ಯಾವುದೇ ಪೊಲೀಸ್ ಭದ್ರತಾ ಬೆಂಗಾವಲು ಪಡೆಯ ವಾಹನ ಪಡೆಯಲಾರದೇ ಕ್ಷೇತ್ರದಲ್ಲಿ ತಿರುಗಾಡುತ್ತಿರುವಾಗ ಅವರು ಯಾಕೆ ಇಷ್ಟೊಂದು ಭದ್ರತೆಯಲ್ಲಿ ಓಡಾಡುತ್ತಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯು ಯಾಕೆ ಮಣೆಹಾಕಿತು, ಎಂಬಿತ್ಯಾದಿ ಟೀಕೆ-ಟಿಪ್ಪಣಿಗಳು ಕ್ಷೇತ್ರದ ಮತದಾರರಲ್ಲಿ ಮೂಡಿದೆ. ಮಾಜಿ ಶಾಸಕರನ್ನ ಆ ಕ್ಷೇತ್ರದ ಮತದಾರರು ತಿರಸ್ಕರಿಸಿದ್ದಾರೆ. ಇಂತಹ ದುರ್ವರ್ತನೆಯಿಂದಲೇ ಅವರನ್ನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಸೋಲಿಸಿದ್ದರು. ಈಗ ಮತ್ತದೇ ದರ್ಪದಿಂದ ಮೆರೆಯಲು ಬರುತ್ತಿದ್ದಾರೆ.
ಬೆಂಗಾವಲು ಪಡೆ ಕೊಡಲು ಅವರೇನು ಮಿನಿಸ್ಟರಾ? : ಮಾಜಿ ಶಾಸಕ ಸುರೇಶ್‌ಬಾಬು ಅವರಿಗೆ ಈ ರೀತಿಯಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಪೊಲೀಸ್ ಭದ್ರತಾ ಬೆಂಗಾವಲು ಪಡೆಯನ್ನ ನೀಡೋದಕ್ಕೆ ಅವರೇನು ಮಿನಿಸ್ಟರಾ ಎಂಬುವುದನ್ನ ಮೊದಲು ಸ್ಪಷ್ಟಪಡಿಸಬೇಕೆಂದು ಕಂಪ್ಲಿ ಶಾಸಕರು ಪಟ್ಟು ಹಿಡಿದಿದ್ದಾರೆ.